ಕೇನ್ ವಿಲಿಯಮ್ಸನ್ 32ನೇ ಶತಕ
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾರಿ ಟೆಸ್ಟ್ ಸರಣಿ ಜಯಿಸಿದ ನ್ಯೂಝಿಲ್ಯಾಂಡ್
ವಿಲಿಯಮ್ಸನ್ | Photo: NDTV
ಹ್ಯಾಮಿಲ್ಟನ್ : ಕೇನ್ ವಿಲಿಯಮ್ಸನ್ ಶತಕದ ಬಲದಿಂದ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊತ್ತ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಕಿವೀಸ್ ತಂಡ ಎರಡನೇ ಟೆಸ್ಟ್ ಪಂದ್ಯವನ್ನು 7 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡು ಈ ಸಾಧನೆ ಮಾಡಿದೆ.
ಶುಕ್ರವಾರ ಸೆಡ್ಡನ್ ಪಾರ್ಕ್ನಲ್ಲಿ ನಾಲ್ಕನೇ ಇನಿಂಗ್ಸ್ನಲ್ಲಿ ಗೆಲ್ಲಲು 267 ರನ್ ಗುರಿ ಪಡೆದಿದ್ದ ನ್ಯೂಝಿಲ್ಯಾಂಡ್ ತಂಡ ವಿಲಿಯಮ್ಸನ್ ಔಟಾಗದೆ ಗಳಿಸಿದ 133 ರನ್ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತು. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು.
ನ್ಯೂಝಿಲ್ಯಾಂಡ್ ತಂಡ 1931ರ ನಂತರ ಆಡಿರುವ ಹಿಂದಿನ 17 ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವಲ್ಲಿ ವಿಫಲವಾಗಿತ್ತು. ಕಿವೀಸ್ 13 ಪಂದ್ಯಗಳಲ್ಲಿ ಸೋಲುಂಡಿದ್ದರೆ, 4 ಬಾರಿ ಡ್ರಾ ಸಾಧಿಸಿತ್ತು.
ಟೆಸ್ಟ್ನ 4ನೇ ದಿನವಾದ ಶುಕ್ರವಾರ 33ರ ಹರೆಯದ ವಿಲಿಯಮ್ಸನ್(ಔಟಾಗದೆ 133 ರನ್, 260 ಎಸೆತ, 12 ಬೌಂಡರಿ, 2 ಸಿಕ್ಸರ್)ವಿಲ್ ಯಂಗ್(ಔಟಾಗದೆ 60 ರನ್, 134 ಎಸೆತ, 8 ಬೌಂಡರಿ)ಅವರೊಂದಿಗೆ 4ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 152 ರನ್ ಸೇರಿಸಿದರು. ವಿಲಿಯಮ್ಸನ್ ಇದೀಗ 7 ಟೆಸ್ಟ್ ಪಂದ್ಯಗಳಲ್ಲಿ 7 ಶತಕ ಗಳಿಸಿದ್ದಾರೆ. ಪ್ರಸಕ್ತ ಸರಣಿಯ ಮೊದಲ ಟೆಸ್ಟ್ನಲ್ಲಿ ವಿಲಿಯಮ್ಸನ್ ಶತಕ ಗಳಿಸಿದ್ದರು. ಆ ಪಂದ್ಯವನ್ನು ನ್ಯೂಝಿಲ್ಯಾಂಡ್ 281 ರನ್ಗಳಿಂದ ಗೆದ್ದುಕೊಂಡಿತ್ತು.
ವಿಲಿಯಮ್ಸನ್ 172 ಇನಿಂಗ್ಸ್ಗಳಲ್ಲಿ 32ನೇ ಶತಕವನ್ನು ಸಿಡಿಸಿದ್ದಾರೆ. ಆಸ್ಟ್ರೇಲಿಯದ ಸ್ಟೀವ್ ಸ್ಮಿತ್(174 ಇನಿಂಗ್ಸ್)ರನ್ನು ಹಿಂದಿಕ್ಕಿದ ವಿಲಿಯಮ್ಸನ್ ಟೆಸ್ಟ್ ಇತಿಹಾಸದಲ್ಲಿ ಈ ಮೈಲಿಗಲ್ಲು ವೇಗವಾಗಿ ತಲುಪಿದ ಆಟಗಾರ ಎನಿಸಿಕೊಂಡಿದ್ದಾರೆ.
ಇಂದು 1 ವಿಕೆಟ್ ನಷ್ಟಕ್ಕೆ 40 ರನ್ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ನ್ಯೂಝಿಲ್ಯಾಂಡ್ ಪರ ವಿಲಿಯಮ್ಸನ್ ದಿನಪೂರ್ತಿ ಆಡಿದರು. 260 ಎಸೆತಗಳ ಇನಿಂಗ್ಸ್ನಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು.
ಆರಂಭಿಕ ಟಾಮ್ ಲ್ಯಾಥಮ್ ಬೆಳಗ್ಗಿನ ಅವಧಿಯಲ್ಲಿ 30 ರನ್ ಗಳಿಸಿ ಔಟಾದರು. ರಚಿನ್ ರವೀಂದ್ರ(20 ರನ್) ಲಂಚ್ ವಿರಾಮದ ನಂತರ ವಿಕೆಟ್ ಒಪ್ಪಿಸಿದರು. ಆಗ ವಿಲ್ ಯಂಗ್ ತನ್ನ ಆರನೇ ಅರ್ಧಶತಕ ಗಳಿಸಿ ತಂಡವನ್ನು ಆಧರಿಸಿದರು.
ದಕ್ಷಿಣ ಆಫ್ರಿಕಾದ ಪರ ಡೇನ್ ಪಿಯೆಟ್(3-93) ಹೊರತುಪಡಿಸಿ ಉಳಿದವರು ವಿಕೆಟ್ ಪಡೆಯುವಲ್ಲಿ ವಿಫಲರಾದರು. ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಆಫ್ ಸ್ಪಿನ್ನರ್ ಪಿಯೆಟ್ ಪಂದ್ಯದಲ್ಲಿ ಒಟ್ಟು 8 ವಿಕೆಟ್ಗಳನ್ನು ಪಡೆದಿದ್ದಾರೆ.
ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 9 ವಿಕೆಟ್ಗಳನ್ನು ಪಡೆದಿರುವ ನ್ಯೂಝಿಲ್ಯಾಂಡ್ನ ವೇಗದ ಬೌಲರ್ ವಿಲ್ ಒ ರೂರ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಒಟ್ಟು 403 ರನ್ ಗಳಿಸಿ ಶ್ರೇಷ್ಠ ಪ್ರದರ್ಶನ ನೀಡಿದ ವಿಲಿಯಮ್ಸನ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.