ನಾಯಕ ಕಳಪೆ ಫಾರ್ಮ್ ನಲ್ಲಿದ್ದರೆ, ತಂಡ ಸಮಸ್ಯೆಗೊಳಗಾಗುತ್ತದೆ: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಶರ್ಮಾಗೆ ಕಪಿಲ್ ದೇವ್ ಸಂದೇಶ

ಕಪಿಲ್ ದೇವ್ (Photo: PTI)
ಹೊಸದಿಲ್ಲಿ: “ತಂಡದ ನಾಯಕನು ಕಳಪೆ ಫಾರ್ಮ್ ನಲ್ಲಿದ್ದರೆ, ತಂಡ ಸಮಸ್ಯೆಗೊಳಗಾಗುತ್ತದೆ” ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಎಚ್ಚರಿಸಿದ್ದಾರೆ.
ರೋಹಿತ್ ಶರ್ಮ ಕಳೆದ 10 ಏಕ ದಿನ ಪಂದ್ಯಗಳಲ್ಲಿ ಕ್ರಮವಾಗಿ 2, 3, 9, 10, 3, 18, 11, 0 ಹಾಗೂ 8 ರನ್ ಮಾತ್ರ ಗಳಿಸಿದ್ದಾರೆ. ಅವರು ಅಕ್ಟೋಬರ್ 2024ರಲ್ಲಿ 50 ರನ್ ಗಳ ಗಡಿ ದಾಟಿದ್ದೇ ಇದುವರೆಗಿನ ಅತ್ಯುತ್ತಮ ರನ್ ಗಳಿಕೆಯಾಗಿದೆ. ಇದರಿಂದ ಸಹಜವಾಗಿಯೇ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.
ಈ ಕುರಿತು Cricket Adda ಯೂಟ್ಯೂಬ್ ವಾಹಿನಿಯಲ್ಲಿ ಮಾತನಾಡಿರುವ ಕಪಿಲ್ ದೇವ್, “ಆತ ದೊಡ್ಡ ಆಟಗಾರ. ಆತ ಆದಷ್ಟು ಶೀಘ್ರವಾಗಿ ತನ್ನ ಫಾರ್ಮ್ ಗೆ ಮರಳಲಿ ಎಂದು ಆಶಿಸುತ್ತೇನೆ. ಕೋಚ್ ಗೌತಮ್ ಗಂಭೀರ್ ಗೆ ಶುಭಾಶಯ ಕೋರುತ್ತೇನೆ. ತಂಡದಲ್ಲಿ ನೆಲೆಯಾಗಲು ಕೊಂಚ ಕಾಲ ಹಿಡಿಯುತ್ತದೆ. ಭಾರತ ತಂಡದ ಪ್ರದರ್ಶನವನ್ನು ನೋಡಲು ಇಡೀ ದೇಶ ಕಾಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಕೆಲ ಕಾಲ ಉತ್ತಮ ಪ್ರದರ್ಶನ ನೀಡಿದೆ. ಆದರೆ, ತಂಡ ಅಸ್ಥಿರವಾಗಿರುವಂತೆ ಕಂಡು ಬರುತ್ತಿದೆ. ತಂಡದ ನಾಯಕನ ಫಾರ್ಮ್ ಕಳಪೆ ಆಗಿದ್ದಾಗ, ತಂಡವು ಸಮಸ್ಯೆಗೊಳಗಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
“ಭಾರತ ತಂಡವು ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ಅಭಿಮಾನಿಗಳ ಆಕ್ರೋಶ ಸಮರ್ಥನೀಯವಾಗಿದೆ. ಈ ಆಟಗಾರರು ಟಿ-20 ವಿಶ್ವಕಪ್ ಗೆದ್ದು ಸ್ವದೇಶಕ್ಕೆ ಮರಳಿದಾಗ, ನಾನು ನನ್ನ ಜೀವನದಲ್ಲಿ ಅಂತಹ ಹುಚ್ಚು ದೃಶ್ಯಗಳನ್ನು ನೋಡಿರಲಿಲ್ಲ. ಹೀಗಾಗಿ, ಅವರು ಕೆಟ್ಟ ಪ್ರದರ್ಶನ ನೀಡಿದಾಗ, ಟೀಕೆ ಕೂಡಾ ಬೆನ್ನು ಹತ್ತುತ್ತದೆ. ಹೀಗಾಗಿಯೇ ನಾನು ಆಟಗಾರರನ್ನು ಹೆಚ್ಚು ಪ್ರಶಂಸಿಸುವುದಿಲ್ಲ. ಅವರಿಗೆ ಅದನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ” ಎಂದು ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.
ಕಳಪೆ ಫಾರ್ಮ್ ನಲ್ಲಿರುವ ರೋಹಿತ್ ಶರ್ಮ ಪಾಲಿಗೆ ಚಾಂಪಿಯನ್ಸ್ ಟ್ರೋಫಿ ಲಿಟ್ಮಸ್ ಟೆಸ್ಟ್ ಆಗಲಿದೆ. ಆದರೆ, ಅದಕ್ಕಾಗಿ ಅವರು ಮಾಡಿಕೊಂಡಿರುವ ಸಿದ್ಧತೆಯ ಬಗ್ಗೆಯೂ ಒಳ್ಳೆಯ ಮಾತುಗಳು ಕೇಳಿ ಬರುತ್ತಿಲ್ಲ. ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಪ್ರಥಮ ಪಂದ್ಯದಲ್ಲಿ ಅವರು ಕೇವಲ 2 ರನ್ ಗೆ ಔಟಾಗಿದ್ದರು. ಹೀಗಾಗಿ, ತಮ್ಮ ಕಳಪೆ ಫಾರ್ಮ್ ಗಾಗಿ ರೋಹಿತ್ ಶರ್ಮ ಕ್ರಿಕೆಟ್ ವಿಶ್ಲೇಷಕರು ಹಾಗೂ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.