ಈ ಋತುವಿನಲ್ಲಿ 9ನೇ ಶತಕ ಗಳಿಸಿದ ಕರುಣ್ ನಾಯರ್

ಕರುಣ್ ನಾಯರ್ | PC : X
ನಾಗ್ಪುರ: ವಿದರ್ಭ ತಂಡದ ಫಾರ್ಮ್ನಲ್ಲಿರುವ ಬ್ಯಾಟರ್ ಕರುಣ್ ನಾಯರ್ ಕೇರಳ ವಿರುದ್ಧ ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದಾರೆ. ಈ ಋತುವಿನಲ್ಲಿ ತನ್ನ 9ನೇ ಶತಕ ಸಿಡಿಸಿ ಮಿಂಚಿದ್ದಾರೆ.
ವಿದರ್ಭ ತಂಡವು ತನ್ನ 2ನೇ ಇನಿಂಗ್ಸ್ನಲ್ಲಿ 7 ರನ್ಗೆ 2 ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ನಾಯರ್ ಅವರು ದಾನಿಶ್ ಮಾಲೆವಾರ್(73 ರನ್)ಅವರೊಂದಿಗೆ 3ನೇ ವಿಕೆಟ್ಗೆ 182 ರನ್ ಸೇರಿಸಿ ಮತ್ತೊಮ್ಮೆ ಆಸರೆಯಾದರು.
184 ಎಸೆತಗಳಲ್ಲಿ ಶತಕವನ್ನು ಪೂರೈಸಿದ ನಾಯರ್ ಅವರು ವಿದರ್ಭ ತಂಡಕ್ಕೆ 286 ರನ್ ಮುನ್ನಡೆ ಒದಗಿಸಿ ಕೇರಳ ತಂಡದ ಪುಟಿದೇಳುವ ವಿಶ್ವಾಸಕ್ಕೆ ಧಕ್ಕೆ ತಂದರು. ನಾಯರ್ ಔಟಾಗದೆ 132 ರನ್(280 ಎಸೆತ, 10 ಬೌಂಡರಿ, 2 ಸಿಕ್ಸರ್)ಗಳಿಸಿದ್ದಾರೆ.
2013-14ರಲ್ಲಿ ಕರ್ನಾಟಕ ತಂಡದ ಪರ ತನ್ನ ಚೊಚ್ಚಲ ರಣಜಿ ಪಂದ್ಯ ಆಡಿದ ನಂತರ ನಾಯರ್ 4ನೇ ಬಾರಿ ಫೈನಲ್ ಪಂದ್ಯದಲ್ಲಿ ಆಡಿದ್ದಾರೆ. ನಾಯರ್ ಇದೀಗ ಪ್ರಶಸ್ತಿ ಸುತ್ತಿನಲ್ಲಿ 2ನೇ ಬಾರಿ ಶತಕ ಸಿಡಿಸಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ 86 ರನ್ ಗಳಿಸಿ 8,000 ಪ್ರಥಮ ದರ್ಜೆ ರನ್ ಪೂರೈಸಿದ್ದ ನಾಯರ್ ಒಂದೇ ರಣಜಿ ಟ್ರೋಫಿ ಋತುವಿನಲ್ಲಿ ಮೊದಲ ಬಾರಿ 800ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ತನ್ನ 9ನೇ ಶತಕವನ್ನು ಸಿಡಿಸಿದ್ದಾರೆ.
33ರ ಹರೆಯದ ನಾಯರ್ ಕಳೆದ ತಿಂಗಳು ನಡೆದಿದ್ದ ವಿಜಯ್ ಹಝಾರೆ ಟ್ರೋಫಿ ಅಭಿಯಾನದಲ್ಲಿ ಮಿಂಚಿದ್ದು 7 ಇನಿಂಗ್ಸ್ಗಳಲ್ಲಿ 5 ಶತಕಗಳ ಸಹಿತ ಒಟ್ಟು 752 ರನ್ ಗಳಿಸಿದ್ದರು. ರಣಜಿ ಟ್ರೋಫಿಯ ಎರಡನೇ ಹಂತದಲ್ಲೂ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದಾರೆ.
ಹೈದರಾಬಾದ್ ವಿರುದ್ಧ ವಿದರ್ಭ ತಂಡ ಆಡಿರುವ ಕೊನೆಯ ಲೀಗ್ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದ ನಾಯರ್, ಕ್ವಾರ್ಟರ್ ಫೈನಲ್ನಲ್ಲಿ ತಮಿಳುನಾಡು ತಂಡದ ವಿರುದ್ಧ ತನ್ನ 22ನೇ ಪ್ರಥಮ ದರ್ಜೆ ಶತಕವನ್ನು ದಾಖಲಿಸಿದ್ದರು.
2013-14ರ ತನ್ನ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಋತುವಿನಲ್ಲಿ ರಣಜಿ ಟ್ರೋಫಿ ಫೈನಲ್ನಲ್ಲಿ ನಾಯರ್ ಆಡಿದ್ದರು.ಆ ವರ್ಷ ಮಹಾರಾಷ್ಟ್ರವನ್ನು ಮಣಿಸಿದ್ದ ಕರ್ನಾಟಕ ತಂಡ ಪ್ರಶಸ್ತಿ ಜಯಿಸಿತ್ತು. ಮರು ವರ್ಷ2014-15ರಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(328 ರನ್) ಗಳಿಸಿದ್ದ ನಾಯರ್ ಕರ್ನಾಟಕ ತಂಡವು ಪ್ರಶಸ್ತಿಯನ್ನು ತನ್ನಲ್ಲೆ ಉಳಿಸಿಕೊಳ್ಳಲು ನೆರವಾಗಿದ್ದರು. ಈ ಸಾಧನೆಗೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.