1 ರನ್ ಇನಿಂಗ್ಸ್ ಮುನ್ನಡೆ; ಕೇರಳ ರಣಜಿ ಟ್ರೋಫಿ ಸೆಮಿಫೈನಲ್ಗೆ

PC : NDTV
ಪುಣೆ: ಜಮ್ಮು ಮತ್ತು ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬುಧವಾರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೇರಳ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಯಿತು ಹಾಗೂ ಒಂದು ರನ್ನ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ರೋಮಾಂಚಕವಾಗಿ ಸೆಮಿಫೈನಲ್ ತಲುಪಿತು.
ಪಂದ್ಯದ ಐದನೇ ದಿನವಾದ ಬುಧವಾರ, ಕೇರಳದ ಎರಡನೇ ಇನಿಂಗ್ಸ್ನಲ್ಲಿ ಸಲ್ಮಾನ್ ನಿಝರ್ (162 ಎಸೆತಗಳಲ್ಲಿ ಅಜೇಯ 44 ರನ್) ಮತ್ತು ಮುಹಮ್ಮದ್ ಅಝರುದ್ದೀನ್ (118 ಎಸೆತಗಳಲ್ಲಿ ಅಜೇಯ 67 ರನ್) ಸುಮಾರು 43 ಓವರ್ಗಳನ್ನು ಆಡಿದರು. ಅವರು ಮುರಿಯದ ಏಳನೇ ವಿಕೆಟ್ಗೆ 115 ರನ್ಗಳ ಭಾಗೀದಾರಿಕೆ ನಿಭಾಯಿಸಿದರು. ಇದರೊಂದಿಗೆ ಕೇರಳವು ತನ್ನ ಎರಡನೇ ಇನಿಂಗ್ಸ್ನಲ್ಲಿ 6 ವಿಕೆಟ್ಗಳ ನಷ್ಟಕ್ಕೆ 295 ರನ್ ಗಳಿಸಿತು.
ಸಲ್ಮಾನ್ ನಿಝರ್ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಕೇರಳವು ನಾಲ್ಕನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್ನಲ್ಲಿ 2 ವಿಕೆಟ್ಗಳ ನಷ್ಟಕ್ಕೆ 100 ರನ್ ಗಳಿಸಿತ್ತು. ಕೊನೆಯ ದಿನವಾದ ಬುಧವಾರ ಆಲೌಟಾಗದಿರುವುದು ಅದರ ಗುರಿಯಾಗಿತ್ತು. ಸಲ್ಮಾನ್ ನಿಝರ್ ಮತ್ತು ಮುಹಮ್ಮದ್ ಅಝರುದ್ದೀನ್ರ ಭಾಗೀದಾರಿಕೆಯು ತಂಡದ ಗರಿಯನ್ನು ನೆರವೇರಿಸಿತು.
ಫೆಬ್ರವರಿ 17ರಂದು ಆರಂಭಗೊಳ್ಳುವ ಸೆಮಿಫೈನಲ್ನಲ್ಲಿ ಕೇರಳವು ಮಾಜಿ ಚಾಂಪಿಯನ್ ಗುಜರಾತನ್ನು ಎದುರಿಸಲಿದೆ. ಇದು 2018-19ರ ಋತುವಿನ ಬಳಿಕ, ಕೇರಳವು ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಮೊದಲ ಬಾರಿಯಾಗಿದೆ. 2018-19ರಲ್ಲಿ ವಯನಾಡ್ನಲ್ಲಿ ನಡೆದ ಸೆಮಿಫೈನಲ್ನಲ್ಲಿ ಕೇರಳವು ವಿದರ್ಭದ ವಿರುದ್ಧ ಇನಿಂಗ್ಸ್ ಮತ್ತು 11 ರನ್ಗಳ ಸೋಲನುಭವಿಸಿತ್ತು. ಅಂತಿಮವಾಗಿ ಆ ಬಾರಿ ವಿದರ್ಭ ಚಾಂಪಿಯನ್ ಆಗಿತ್ತು.
ಎಡಗೈ ಬ್ಯಾಟರ್ ಸಲ್ಮಾನ್ ನಿಝರ್ ಕೇರಳದ ಮೊದಲ ಇನಿಂಗ್ಸ್ನಲ್ಲಿ ಅಜೇಯ 112 ರನ್ಗಳನ್ನು ಗಳಿಸಿ ಮಹತ್ವದ ದೇಣಿಗೆ ನೀಡಿದ್ದರು. ಅವರು ಬಸಿಲ್ ತಂಪಿ ಜೊತೆಗೆ 81 ರನ್ಗಳ ಭಾಗೀದಾರಿಕೆ ನಿಭಾಯಿಸಿ ತಂಡಕ್ಕೆ ಮಹತ್ವದ ಒಂದು ರನ್ನ ಮೊದಲ ಇನಿಂಗ್ಸ್ ಮುನ್ನಡೆ ಒದಗಿಸಿದ್ದರು.
ಕೇರಳ ತಂಡದ ನಾಯಕ ಸಚಿನ್ ಬೇಬಿ (48) ಮತ್ತು ಅಕ್ಷಯ್ ಚಂದ್ರನ್ (48) ಮೂರನೇ ವಿಕೆಟ್ಗೆ 58 ರನ್ಗಳನ್ನು ಸೇರಿಸಿದರು. ಜೊತೆಗೆ, ಅವರು ಸುಮಾರು 44 ಓವರ್ಗಳನ್ನು ಆಡಿದರು.
ಸಂಕ್ಷಿಪ್ತ ಸ್ಕೋರ್
ಜಮ್ಮು ಮತ್ತು ಕಾಶ್ಮೀರ 280 ಮತ್ತು 399-9 (ಡಿಕ್ಲೇರ್ಡ್)
ಕೇರಳ 281 ಮತ್ತು 295-6
ಸಲ್ಮಾನ್ ನಿಝರ್ 44 ಅಜೇಯ, ಮುಹಮ್ಮದ್ ಅಝರುದ್ದೀನ್ 67 ಅಜೇಯ, ಸಚಿನ್ ಬೇಬಿ 48, ಅಕ್ಷಯ್ ಚಂದ್ರನ್ 48
ಸಾಹಿಲ್ ಲೋತ್ರಾ 2-50