ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದ ಕಿವೀಸ್ ಬೌಲರ್ ಟಿಮ್ ಸೌಥಿ

ಟಿಮ್ ಸೌಥಿ | PC : NDTV
ಹ್ಯಾಮಿಲ್ಟನ್ : ಟೆಸ್ಟ್ ವೃತ್ತಿಬದುಕಿನ ತನ್ನ ಅಂತಿಮ ಪಂದ್ಯ ಆಡುತ್ತಿರುವ ನ್ಯೂಝಿಲ್ಯಾಂಡ್ನ ಮಾಜಿ ನಾಯಕ ಟಿಮ್ ಸೌಥಿ ವೆಸ್ಟ್ಇಂಡೀಸ್ ನ ದಿಗ್ಗಜ ಕ್ರಿಸ್ ಗೇಲ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಹ್ಯಾಮಿಲ್ಟನ್ನಲ್ಲಿ ಶನಿವಾರ ಆರಂಭವಾದ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ನ ಮೊದಲ ದಿನದಾಟದಲ್ಲಿ ಮೂರು ಸಿಕ್ಸರ್ಗಳನ್ನು ಸಿಡಿಸಿದ ಸೌಥಿ ಈ ಸಾಧನೆ ಮಾಡಿದ್ದಾರೆ.
ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 98 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ಬ್ಯಾಟರ್ಗಳ ಪೈಕಿ ಗೇಲ್ ಜೊತೆ ಜಂಟಿ 4ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಈಗಾಗಲೇ ವಿದಾಯ ಘೋಷಿಸಿರುವ ಟಿಮ್ ಸೌಥಿ ಕಿವೀಸ್ ಪರ ಮೊದಲ ಇನಿಂಗ್ಸ್ನಲ್ಲಿ ಕೇವಲ 10 ಎಸೆತಗಳಲ್ಲಿ 23 ರನ್ ಗಳಿಸಿ ಗಮನ ಸೆಳೆದರು.
►ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟರ್ಗಳ ಪಟ್ಟಿ:
ಬೆನ್ ಸ್ಟೋಕ್ಸ್: 133
ಬ್ರೆಂಡನ್ ಮೆಕಲಮ್: 107
ಆ್ಯಡಮ್ ಗಿಲ್ಕ್ರಿಸ್ಟ್: 100
ಟಿಮ್ ಸೌಥಿ: 98
ಕ್ರಿಸ್ ಗೇಲ್:98
►ಸೌಥಿಗೆ ಗೌರವ ರಕ್ಷೆ
ನ್ಯೂಝಿಲ್ಯಾಂಡ್ನ ಆಲ್ರೌಂಡರ್ 36ರ ಹರೆಯದ ಟಿಮ್ ಸೌಥಿ 107ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲು ಕುಟುಂಬ ಸಮೇತ ಮೈದಾನಕ್ಕೆ ಆಗಮಿಸಿದರು. ಸೌಥಿಗೆ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ತಂಡದ ಆಟಗಾರರು ಸಾಲಾಗಿ ನಿಂತು ಗೌರವ ರಕ್ಷೆ ನೀಡಿದರು. ಆ ಮೂಲಕ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.
ನಿವೃತ್ತಿಯಾಗುತ್ತಿರುವ ಸೌಥಿಗೆ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಆಟಗಾರರು ಹೃತ್ಪೂರ್ವಕ ಗೌರವ ರಕ್ಷೆ ನೀಡಿ ಗಮನ ಸೆಳೆದರು.
ಸೌಥಿ ಈ ತನಕ 107 ಟೆಸ್ಟ್ ಪಂದ್ಯಗಳಲ್ಲಿ 389 ವಿಕೆಟ್ ಹಾಗೂ 2,243 ರನ್ ಗಳಿಸಿದ್ದಾರೆ. 64 ರನ್ಗೆ 7 ವಿಕೆಟ್ಗಳನ್ನು ಪಡೆದಿರುವುದು ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಏಳು ಬಾರಿ ಅರ್ಧಶತಕಗಳನ್ನು ಸಿಡಿಸಿದ್ದಾರೆ.
ನಾಳೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ | ಮುಂಬೈ ವಿರುದ್ಧ ಮಧ್ಯಪ್ರದೇಶಕ್ಕೆ ಕಠಿಣ ಸವಾಲು (ವಾ/ಫೇ)
ಬೆಂಗಳೂರು : ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಪಂದ್ಯಾವಳಿಯ ಫೈನಲ್ ಪಂದ್ಯವು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿದ್ದು, ಮುಂಬೈ ತಂಡವನ್ನು ಪ್ರಶಸ್ತಿ ಗೆಲ್ಲದಂತೆ ತಡೆಯಲು ಮಧ್ಯಪ್ರದೇಶ ತಂಡ ಭಾರೀ ಪ್ರಯತ್ನ ಪಡಬೇಕಾದ ಅಗತ್ಯ ಇದೆ.
ಗ್ರೂಪ್ ಹಂತದಲ್ಲಿ ಕೇರಳ ತಂಡದ ವಿರುದ್ಧ ಸೋತ ನಂತರ ಮುಂಬೈ ತಂಡವು ಗೆಲುವಿನ ಓಟದಲ್ಲಿ ತೊಡಗಿದೆ. ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್,ಶಿವಂ ದುಬೆ ಹಾಗೂ ಸೂರ್ಯಾಂಶ್ ಶೆಡ್ಗೆ ಅವರನ್ನೊಳಗೊಂಡ ಬ್ಯಾಟಿಂಗ್ ಸರದಿ ಯಾವುದೇ ಗುರಿಯನ್ನು ಬೆನ್ನಟ್ಟುವ ಸಾಮರ್ಥ್ಯವನ್ನು ಹೊಂದಿದೆ.
ವಿಶೇಷವಾಗಿ ಆರಂಭಿಕ ಬ್ಯಾಟರ್ ರಹಾನೆ ಈಗ ಭರ್ಜರಿ ಫಾರ್ಮ್ನಲ್ಲಿದ್ದು, ಪಂದ್ಯಾವಳಿಯ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಮಿಂಚಿನ ಸ್ಟ್ರೋಕ್ ಪ್ಲೇ ಮೂಲಕ ಪವರ್ಪ್ಲೇನಲ್ಲಿ ಪಂದ್ಯವನ್ನು ಸೆಳೆಯಬಲ್ಲರು.
ಶ್ರೇಯಾಂಶ್, ಶ್ರೇಷ್ಠ ಫಿನಿಶರ್ ಆಗಿದ್ದು ಟೂರ್ನಿಯಲ್ಲಿ ಗರಿಷ್ಠ ಸ್ಟ್ರೈಕ್ರೇಟ್(256.7)ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಹೊಸ ಚೆಂಡಿನ ಬೌಲರ್ಗಳಾದ ಮೋಹಿತ್ ಅವಸ್ಥಿ ಹಾಗೂ ಶಾರ್ದೂಲ್ ಠಾಕೂರ್ ತಲಾ 13 ವಿಕೆಟ್ಗಳನ್ನು ಪಡೆದಿದ್ದಾರೆ.
ಮಧ್ಯಪ್ರದೇಶ ತಂಡವು ರಜತ್ ಪಾಟಿದಾರ್ ಅವರ ಮ್ಯಾಜಿಕಲ್ ಇನಿಂಗ್ಸ್ ಅನ್ನೇ ಹೆಚ್ಚು ಅವಲಂಭಿಸಿದೆ. ಆರ್ಸಿಬಿ ಬ್ಯಾಟರ್ ಪಾಟಿದಾರ್ ಅವರು ದಿಲ್ಲಿ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಸೆಮಿ ಫೈನಲ್ನಲ್ಲಿ 29 ಎಸೆತಗಳಲ್ಲಿ ಔಟಾಗದೆ 66 ರನ್ ಸಹಿತ 9 ಪಂದ್ಯಗಳಲ್ಲಿ 4 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಹರ್ಪ್ರೀತ್ ಸಿಂಗ್ ಹಾಗೂ ವೆಂಕಟೇಶ್ ಅಯ್ಯರ್ ತಂಡವನ್ನು ಆಧರಿಸಬಲ್ಲರು.