ಕಿವೀಸ್ ಗೆಲುವಿಗೆ 369 ರನ್ ಗಳ ಬೃಹತ್ ಗುರಿ ; ಚೊಚ್ಚಲ 5 ವಿಕೆಟ್ ಗೊಂಚಿಲು ಪಡೆದ ಗ್ಲೆನ್ ಫಿಲಿಪ್ಸ್
ಗ್ಲೆನ್ ಫಿಲಿಪ್ಸ್ | Photo: PTI
ವೆಲಿಂಗ್ಟನ್ : ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಪ್ರವಾಸಿ ಆಸ್ಟ್ರೇಲಿಯವು ನ್ಯೂಝಿಲ್ಯಾಂಡ್ ಗೆಲುವಿಗೆ 369 ರನ್ ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ.
ವೆಲಿಂಗ್ಟನ್ನ ಬೇಸಿನ್ ರಿಸರ್ವ್ನ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ದಿನದಾಟ ಮುಗಿದಾಗ ನ್ಯೂಝಿಲ್ಯಾಂಡ್ 111 ರನ್ಗಳನ್ನು ಗಳಿಸುವಷ್ಟರಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡಿದೆ. ಪಂದ್ಯವನ್ನು ಗೆಲ್ಲಲು ಅದಕ್ಕೆ ಇನ್ನೂ 258 ರನ್ ಗಳ ಅಗತ್ಯವಿದೆ.
ನ್ಯೂಝಿಲ್ಯಾಂಡ್ ಪರವಾಗಿ ಸ್ಪಿನ್ನರ್ ಗ್ಲೆನ್ ಫಿಲಿಪ್ಸ್ ಐದು ವಿಕೆಟ್ ಗಳ ಗೊಂಚಿಲು ಪಡೆದರು. ಅವರು 45 ರನ್ಗಳನ್ನು ನೀಡಿ 5 ವಿಕೆಟ್ ಗಳನ್ನು ಉರುಳಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರ ಮೊದಲ ಸಾಧನೆಯಾಗಿದೆ. ಅವರ ಅಸಾಧಾರಣ ಬೌಲಿಂಗ್ ದಾಳಿಯ ನೆರವಿನಿಂದ ನ್ಯೂಝಿಲ್ಯಾಂಡ್ಗೆ ಆಸ್ಟ್ರೇಲಿಯದ ದ್ವಿತೀಯ ಇನಿಂಗ್ಸನ್ನು 164 ರನ್ ಗಳಿಗೆ ಮಿತಿಗೊಳಿಸಲು ಸಾಧ್ಯವಾಯಿತು.
ಆಸ್ಟ್ರೇಲಿಯವು ದ್ವಿತೀಯ ಇನಿಂಗ್ಸ್ ನಲ್ಲಿ ತನ್ನ ಕೊನೆಯ ಆರು ವಿಕೆಟ್ ಗಳನ್ನು ಕೇವಲ 37 ರನ್ ಗಳಿಗೆ ಕಳೆದುಕೊಂಡಿತು.
ನ್ಯೂಝಿಲ್ಯಾಂಡ್ ಬೌಲಿಂಗ್ನಲ್ಲಿ ಉತ್ತಮ ನಿರ್ವಹಣೆ ನೀಡಿದ ಹೊರತಾಗಿಯೂ, ಬ್ಯಾಟಿಂಗ್ನಲ್ಲಿ ತಡವರಿಸಿತು. ದ್ವಿತೀಯ ಇನಿಂಗ್ಸ್ ನಲ್ಲಿ ಅದರ ಆರಂಭಿಕರಾದ ಟಾಮ್ ಲ್ಯಾತಮ್ ಮತ್ತು ವಿಲ್ ಯಂಗ್ ಬೇಗನೇ ಪೆವಿಲಿಯನ್ ಹಾದಿ ಹಿಡಿದರು. ಅಷ್ಟೂ ಸಾಲದೆಂಬಂತೆ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ 9 ರನ್ ಗಳಿಸಿ ನಿರ್ಗಮಿಸಿದರು.
ಈ ಪೈಕಿ ಲ್ಯಾತಮ್ ಮತ್ತು ವಿಲಿಯಮ್ಸನ್ ವಿಕೆಟ್ಗಳನ್ನು ನತಾನ್ ಲಯೋನ್ ಪಡೆದರು.
ಈ ಹಂತದಲ್ಲಿ ರಚಿನ್ ರವೀಂದ್ರ ನ್ಯೂಝಿಲ್ಯಾಂಡ್ ತಂಡದ ಆಪ್ತರಕ್ಷಕನಾಗಿ ಹೊರಹೊಮ್ಮಿದರು. ಮೂರನೇ ದಿನದಾಟ ಮುಗಿದಾಗ ಅವರು 56 ರನ್ ಗಳಿಸಿ ಕ್ರೀಸ್ ನಲ್ಲಿ ಉಳಿದಿದ್ದಾರೆ.
ಅವರಿಗೆ ಸರಿಯಾದ ಬೆಂಬಲವನ್ನು ಡ್ಯಾರಿಲ್ ಮಿಚೆಲ್ ನೀಡಿದ್ದಾರೆ. ಮಿಚೆಲ್ 12 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಈ ಜೋಡಿಯು ಮುರಿಯದ ನಾಲ್ಕನೇ ವಿಕೆಟ್ಗೆ 52 ರನ್ ಗಳನ್ನು ಸೇರಿಸಿದೆ.
ನಾಲ್ಕನೇ ಇನಿಂಗ್ಸ್ ನಲ್ಲಿ ನ್ಯೂಝಿಲ್ಯಾಂಡ್ ಯಶಸ್ವಿಯಾಗಿ ಗುರಿಯನ್ನು ಬೆನ್ನತ್ತಿದ ಗರಿಷ್ಠ ಮೊತ್ತವೆಂದರೆ 324. 1994ರಲ್ಲಿ ಕ್ರೈಸ್ಟ್ಚರ್ಚ್ ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಇದನ್ನು ಸಾಧಿಸಿದೆ.
ವೆಲಿಂಗ್ಟನ್ನ ಬೇಸಿನ್ ರಿಸರ್ವ್ ನಲ್ಲಿ ಅದು ಯಶಸ್ವಿಯಾಗಿ ಬೆನ್ನತ್ತಿದ ಗುರಿ 285. ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಟೆಸ್ಟ್ ನಲ್ಲಿ ಅದು ಈ ಗುರಿಯನ್ನು ಬೆನ್ನತ್ತಿದೆ.
ಆದರೆ, ಈ ಬಾರಿ ಆಫ್ ಸ್ಪಿನ್ನರ್ ನತಾನ್ ಲಯೋನ್ರ ದಾಳಿಯನ್ನು ಎದುರಿಸಿ ನಿಲ್ಲಲು ನ್ಯೂಝಿಲ್ಯಾಂಡ್ಗೆ ಸಾಧ್ಯವಾಗುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಲಯೋನ್ ಬ್ಯಾಟ್ ನಲ್ಲಿ 41 ರನ್ ಗಳ ದೇಣಿಗೆಯನ್ನೂ ನೀಡಿದ್ದಾರೆ ಹಾಗೂ ನ್ಯೂಝಿಲ್ಯಾಂಡ್ ನ ಮೊದಲ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಆಸ್ಟ್ರೇಲಿಯವು ಪ್ರಥಮ ಇನಿಂಗ್ಸ್ ನಲ್ಲಿ 383 ರನ್ಗಳನ್ನು ಕಲೆ ಹಾಕಿದ್ದರೂ, ದ್ವಿತೀಯ ಇನಿಂಗ್ಸ್ನಲ್ಲಿ ಅದರ ಬ್ಯಾಟಿಂಗ್ ಕಳಪೆಯಾಗಿತ್ತು. ನ್ಯೂಝಿಲ್ಯಾಂಡ್ನ ಗ್ಲೆನ್ ಫಿಲಿಪ್ಸ್ ಕೇವಲ 45 ರನ್ಗಳನ್ನು ನೀಡಿ 5 ಮಹತ್ವದ ವಿಕೆಟ್ಗಳನ್ನು ಉರುಳಿಸಿದರು. ಅವರು ಉಸ್ಮಾನ್ ಖ್ವಾಜ ಟ್ರಾವಿಸ್ ಹೆಡ್, ಮಿಚೆಲ್ ಮಾರ್ಶ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್ರ ವಿಕೆಟ್ಗಳನ್ನು ಉರುಳಿಸಿದರು.