ಐಪಿಎಲ್ ಸಭೆಯಲ್ಲಿ KKR ಮಾಲಕ ಶಾರೂಖ್ ಖಾನ್ ಹಾಗೂ ಪಂಜಾಬ್ ಮಾಲಕ ನೆಸ್ ವಾಡಿಯಾ ನಡುವೆ ವಾಗ್ವಾದ: ವರದಿ
ಶಾರೂಖ್ ಖಾನ್ | PC : PTI
ಮುಂಬೈ: ಐಪಿಎಲ್ 2025ರ ಹರಾಜು ಪ್ರಕ್ರಿಯೆಗಾಗಿನ ಸಿದ್ಧತೆಗಳು ಕಾವೇರುತ್ತಿದ್ದು, ಈ ನಡುವೆ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಹ ಮಾಲಕ ಶಾರೂಖ್ ಖಾನ್ ಹಾಗೂ ಪಂಜಾಬ್ ಕಿಂಗ್ಸ್ ಸಹ ಮಾಲಕ ನೆಸ್ ವಾಡಿಯಾ ನಡುವೆ ವಾಗ್ವಾದ ನಡೆದಿದೆ ಎಂದು Cricbuzz ವರದಿ ಮಾಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಜುಲೈ 31ರಂದು ಐಪಿಎಲ್ ಮಹಾ ಹರಾಜು ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಬೇಕಾದ ಆಟಗಾರರನ್ನು ಉಳಿಸಿಕೊಳ್ಳಬೇಕಾದ ನಿಯಮಗಳು ಹಾಗೂ ಇನ್ನಿತರ ವಿಧಾನಗಳ ಕುರಿತು ಐಪಿಎಲ್ ಫ್ರಾಂಚೈಸಿ ಮಾಲಕರ ಸಭೆಯನ್ನು ಆಯೋಜಿಸಲಾಗಿತ್ತು. ಈ ಬಾರಿಯ ಐಪಿಎಲ್ ಫೈನಲಿಸ್ಟ್ ಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಸೇರಿದಂತೆ ಕೆಲವು ಫ್ರಾಂಚೈಸಿಗಳ ಮಾಲಕರು ಈ ಮಹಾ ಹರಾಜು ಪ್ರಕ್ರಿಯೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ನಡೆದ ಸಭೆಯಲ್ಲಿ ಕೆಕೆಆರ್ ಸಹ ಮಾಲಕ ಶಾರೂಖ್ ಖಾನ್ ಹಾಗೂ ಪಂಜಾಬ್ ಕಿಂಗ್ಸ್ ನ ಸಹ ಮಾಲಕ ನೆಸ್ ವಾಡಿಯಾ ನಡುವೆ ವಾಗ್ವಾದ ನಡೆಯಿತು ಎಂದು ವರದಿಯಾಗಿದ್ದು, ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಸಂಖ್ಯೆಯ ಬಗ್ಗೆ ಇಬ್ಬರಲ್ಲೂ ಭಿನ್ನಮತ ಮೂಡಿತು ಎಂದು ಹೇಳಲಾಗಿದೆ.
ಈ ಹಿಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿರುವುದರಿಂದ ಉತ್ತೇಜಿತಗೊಂಡಿರುವ ಕೆಕೆಆರ್ ಹಾಗೂ SRH ತಂಡಗಳು ಈ ಮಹಾ ಹರಾಜಿನ ವಿರುದ್ಧ ವಕೀಲಿಕೆ ನಡೆಸಿದರೆ, ತಂಡಗಳನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಹಾಗೂ ಐಪಿಎಲ್ 2025ಕ್ಕೂ ಮುನ್ನ ಕಡಿಮೆ ಸಂಖ್ಯೆಯ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಪಂಜಾಬ್ ಕಿಂಗ್ಸ್, ದಿಲ್ಲಿ ಕ್ಯಾಪಿಟಲ್ಸ್ ನಂತಹ ತಂಡಗಳು ವಾದಿಸಿದವು.
ಆದರೆ, ತಮ್ಮ ಹಾಗೂ ಶಾರೂಖ್ ಖಾನ್ ನಡುವೆ ಸಭೆಯಲ್ಲಿ ವಾಗ್ವಾದ ನಡೆಯಿತು ಎಂಬ ವರದಿಗಳನ್ನು ತಳ್ಳಿ ಹಾಕಿರುವ ನೆಸ್ ವಾಡಿಯಾ, “ನನಗೆ 25ಕ್ಕಿಂತ ಹೆಚ್ಚು ವರ್ಷಗಳಿಂದ ಶಾರೂಖ್ ಖಾನ್ ಪರಿಚಿತರು. ನಮ್ಮಿಬ್ಬರ ನಡುವೆ ಯಾವುದೇ ವೈರತ್ವವಿಲ್ಲ” ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.