ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿ | ಅಭ್ಯಾಸ ಆರಂಭಿಸಿದ ಕೆ.ಎಲ್.ರಾಹುಲ್
ಕೆ.ಎಲ್.ರಾಹುಲ್ | PTI
ಹೊಸದಿಲ್ಲಿ : ಪರ್ತ್ನಲ್ಲಿ ನ.22ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿರುವ ಟೀಮ್ ಇಂಡಿಯಾಕ್ಕೆ ಕೆ.ಎಲ್.ರಾಹುಲ್ ಅವರ ಫಾರ್ಮ್ ಪ್ರಮುಖ ಚಿಂತೆಯ ವಿಚಾರವಾಗಿದೆ.
ಆರಂಭಿಕ ಬ್ಯಾಟರ್ ರಾಹುಲ್ ಇತ್ತೀಚೆಗೆ ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ತಂಡ 0-3 ಅಂತರದಿಂದ ಸರಣಿ ಸ್ವೀಪ್ ಆದ ಸಂದರ್ಭದಲ್ಲಿ ಕಳಪೆ ಫಾರ್ಮ್ ನಲ್ಲಿದ್ದರು.
ವಾಕಾದಲ್ಲಿ ಮಂಗಳವಾರ ನಡೆದ ತರಬೇತಿ ಸಮಯದಲ್ಲಿ ಇದ್ದ ಪ್ರಮುಖ ಬ್ಯಾಟರ್ಗಳ ಪೈಕಿ ಒಬ್ಬರಾಗಿರುವ ರಾಹುಲ್ ಮೊದಲ ಟೆಸ್ಟ್ ಆರಂಭಕ್ಕೆ ಮೊದಲು ತನ್ನ ಮೊದಲಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ಅವರು ರಾಹುಲ್ರೊಂದಿಗೆ ಸೇರಿಕೊಂಡಿದ್ದು, ಐತಿಹಾಸಿಕ ಸರಣಿಗೆ ತಮ್ಮ ತಯಾರಿಯನ್ನು ಚುರುಕುಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧ ಆಡಿದ್ದ ಏಕೈಕ ಪಂದ್ಯದಲ್ಲಿ ರಾಹುಲ್ 0 ಹಾಗೂ 1 ರನ್ ಗಳಿಸಿದ್ದರು. ಪರಿಣಾಮವಾಗಿ ಅವರು ಉಳಿದೆರಡು ಪಂದ್ಯಗಳಲ್ಲಿ ಆಡುವ 11ರ ಬಳಗದಿಂದ ಹೊರಗುಳಿದಿದ್ದರು.
ಆಸ್ಟ್ರೇಲಿಯ ಎ ಹಾಗೂ ಭಾರತ ಎ ತಂಡಗಳ ನಡುವೆ ಇತ್ತೀಚೆಗೆ ನಡೆದಿದ್ದ ಪಂದ್ಯದಲ್ಲಿ ಪರದಾಟ ಮುಂದುವರಿಸಿದ್ದ ರಾಹುಲ್ ಕೇವಲ 4 ಹಾಗೂ 10 ರನ್ ಗಳಿಸಿದ್ದರು.
ಆಸ್ಟ್ರೇಲಿಯದ ಸವಾಲಿನ ವಾತಾವರಣದಲ್ಲಿ ಭಾರತ ತಂಡವು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಯಸುತ್ತಿರುವಾಗಲೇ ರಾಹುಲ್ ಫಾರ್ಮ್ಗೆ ಮರಳಲು ಎದುರು ನೋಡುತ್ತಿದ್ದಾರೆ.
ಭಾರತ ತಂಡವು ಆಸ್ಟ್ರೇಲಿಯದಲ್ಲಿ ಸತತ ಮೂರನೇ ಟೆಸ್ಟ್ ಸರಣಿ ಗೆಲ್ಲುವತ್ತ ಚಿತ್ತಹರಿಸಿದೆ. ಈ ಹಿಂದೆ 2018-19ರಲ್ಲಿ ವಿರಾಟ್ ಕೊಹ್ಲಿ ಹಾಗೂ 2020-21ರಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಭಾರತವು ಸರಣಿ ಜಯಿಸಿತ್ತು.