ಪರ್ತ್ ಟೆಸ್ಟ್ ಗೆ ಕೆ.ಎಲ್.ರಾಹುಲ್ ಫಿಟ್
ಕೆ.ಎಲ್.ರಾಹುಲ್ | PC : PTI
ಮೆಲ್ಬರ್ನ್ : ಪರ್ತ್ನಲ್ಲಿ ನಡೆದ ಇಂಟ್ರಾಸ್ಕ್ವಾಡ್ ಪಂದ್ಯದ ವೇಳೆ ಆಗಿರುವ ಗಾಯದಿಂದ ಚೇತರಿಸಿಕೊಂಡಿರುವ ಭಾರತದ ಬ್ಯಾಟರ್ ಕೆ.ಎಲ್.ರಾಹುಲ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಫಿಟ್ ಇದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಬಿಡುಗಡೆ ಮಾಡಿ ಬಿಸಿಸಿಐ ಖಚಿತಪಡಿಸಿದೆ.
ಒಂದು ನಿಮಿಷದ ದೃಶ್ಯದಲ್ಲಿ ರಾಹುಲ್ ಅವರು ರವಿವಾರ ನೆಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಮೂರು ದಿನಗಳ ಪಂದ್ಯದಲ್ಲಿ ಶುಕ್ರವಾರ ಪ್ರಸಿದ್ಧ ಕೃಷ್ಣ ಎಸೆದ ಚೆಂಡು ರಾಹುಲ್ ರ ಮೊಣಕೈಗೆ ತಗಲಿದ ಕಾರಣ ಅವರು ಮೈದಾನ ತೊರೆದಿದ್ದರು.
ನಾನು ಇಂದು ಬ್ಯಾಟಿಂಗ್ ಮಾಡಿದ್ದೇನೆ. ಮೊದಲ ಪಂದ್ಯಕ್ಕೆ ಸಿದ್ಧನಾಗುತ್ತಿದ್ದೇನೆ. ನಾನು ಇಲ್ಲಿಗೆ ಬೇಗನೆ ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಈ ಸರಣಿ ತಯಾರಿಗೆ ನನಗೆ ಸಾಕಷ್ಟು ಸಮಯ ಲಭಿಸಿದೆ. ನಾನು ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಕಾತರದಿಂದಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ಅವರು ಇತ್ತೀಚೆಗೆ ಆಸ್ಟ್ರೇಲಿಯ ಎ ತಂಡದ ವಿರುದ್ಧ ಭಾರತ ಎ ತಂಡದ ಪರ 2ನೇ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡಿದ್ದರು. ರಾಹುಲ್ ಅವರ ಗಾಯ ಹಾಗೂ ಚೇತರಿಕೆಯ ಪ್ರಕ್ರಿಯೆ ಬಗ್ಗೆ ಟೀಮ್ ಇಂಡಿಯಾದ ಫಿಸಿಯೋ ವಿವರಣೆ ನೀಡಿದ್ದಾರೆ.
ರಾಹುಲ್ ಗೆ ಯಾವುದೇ ಗಾಯಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ನಮಗೆ ಮುಖ್ಯವಾಗಿದೆ. ಅವರಿಗೆ ಗಾಯವಾಗಿ 48 ಗಂಟೆಗಳಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಎಕ್ಸ್-ರೇ ಸ್ಕ್ಯಾನಿಂಗ್ ನ ವರದಿಯಲ್ಲಿ ಅವರು ಚೆನ್ನಾಗಿರುವುದು ಕಂಡುಬಂದಿದೆ ಎಂದು ಫಿಜಿಯೋ ಕಮಲೇಶ್ ಜೈನ್ ಹೇಳಿದ್ದಾರೆ.