ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಿದ ಕನ್ನಡಿಗ ಕೆ.ಎಲ್.ರಾಹುಲ್

ಕೆ.ಎಲ್.ರಾಹುಲ್ | PC : PTI
ದುಬೈ: ಭಾರತೀಯ ಕ್ರಿಕೆಟ್ ತಂಡದಲ್ಲಿರುವ ಸ್ಟಾರ್ ಆಟಗಾರರ ಪೈಕಿ ಕೆ.ಎಲ್.ರಾಹುಲ್ ಕೂಡ ಒಬ್ಬರು. ರಿಷಭ್ ಪಂತ್ ಅವರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಟೀಮ್ ಇಂಡಿಯಾದ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ರಾಹುಲ್ ಅವರು ಭಾರತ ಕ್ರಿಕೆಟ್ ತಂಡದ ಐತಿಹಾಸಿಕ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ( ಆ ಪಂದ್ಯದಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಗಲಿಲ್ಲ)ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿರುವ ಉಳಿದ ಎಲ್ಲ 4 ಪಂದ್ಯಗಳಲ್ಲಿ ರಾಹುಲ್ ಅವರು ತಂಡದ ಇನಿಂಗ್ಸ್ಗೆ ‘ಅಂತಿಮ ಸ್ಪರ್ಶ’ನೀಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಕರ್ನಾಟಕದ ಆಟಗಾರ ರಾಹುಲ್ ಬಾಂಗ್ಲಾದೇಶ ವಿರುದ್ಧ 47 ಎಸೆತಗಳಲ್ಲಿ 41 ರನ್, ನ್ಯೂಝಿಲ್ಯಾಂಡ್ ವಿರುದ್ದ 29 ಎಸೆತಗಳಲ್ಲಿ 23 ರನ್, ಆಸ್ಟ್ರೇಲಿಯದ ವಿರುದ್ಧ ಸೆಮಿ ಫೈನಲ್ನಲ್ಲಿ 34 ಎಸೆತಗಳಲ್ಲಿ 42 ರನ್ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಫೈನಲ್ ಪಂದ್ಯದಲ್ಲಿ 33 ಎಸೆತಗಳಲ್ಲಿ ಔಟಾಗದೆ 34 ರನ್ ಗಳಿಸಿದ್ದರು. ಟೂರ್ನಿಯಲ್ಲಿ 5 ಪಂದ್ಯಗಳ 4 ಇನಿಂಗ್ಸ್ಗಳಲ್ಲಿ ಒಟ್ಟು 140 ರನ್ ಗಳಿಸಿದ್ದು ಔಟಾಗದೆ 42 ರನ್ ಗರಿಷ್ಠ ಮೊತ್ತವಾಗಿದೆ.
ಸ್ಪಿನ್ನರ್ಗಳ ವಿರುದ್ಧ ಆಡುವಾಗ ಸಾಕಷ್ಟು ಸುಧಾರಣೆ ಕಂಡಿರುವ ರಾಹುಲ್ ಬೌಲರ್ಗಳ ಮೇಲೆ ಸವಾರಿ ಮಾಡಿದ್ದಾರೆ. ನ್ಯೂಝಿಲ್ಯಾಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ವಿರುದ್ಧ ಮುನ್ನುಗ್ಗಿ ಆಡಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.
ರಾಹುಲ್ಗೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಬೆಂಬಲವಾಗಿ ನಿಂತಿದ್ದರು.
ಆಸ್ಟ್ರೇಲಿಯದ ವಿರುದ್ಧ ಸೆಮಿ ಫೈನಲ್ ಪಂದ್ಯದ ಗೆಲುವಿನ ನಂತರ ರಾಹುಲ್ಗೋಸ್ಕರ ಪಂತ್ರನ್ನು ಹೊರಗಿಟ್ಟಿರುವ ಕುರಿತ ಪ್ರಶ್ನೆಗೆ ಆತ್ಮವಿಶ್ವಾಸದಿಂದ ಉತ್ತರಿಸಿದ ಗಂಭೀರ್, ‘‘ಏಕದಿನ ಕ್ರಿಕೆಟ್ನಲ್ಲಿ ರಾಹುಲ್ ಅವರ ಸರಾಸರಿ 50. ಇದು ನನ್ನ ಉತ್ತರ’’ ಎಂದಿದ್ದರು.
ಪ್ರಮುಖವಾಗಿ ಒತ್ತಡದ ಪರಿಸ್ಥಿತಿಯಲ್ಲಿ ರಾಹುಲ್ ಅವರ ಅಮೂಲ್ಯ ಕೊಡುಗೆಗಳನ್ನು ಶ್ಲಾಘಿಸಿದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ‘‘ಕಳೆದ ಹಲವು ವರ್ಷಗಳಿಂದ ತಂಡಕ್ಕಾಗಿ ರಾಹುಲ್ ಸಾಕಷ್ಟು ಸವಾಲಿನ ಕೆಲಸ ಮಾಡಿದ್ದಾರೆ. ಈ ಪಂದ್ಯಾವಳಿಯಲ್ಲಿ ಅತ್ಯಂತ ಮುಖ್ಯವಾಗಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಅವರು ನೀಡಿರುವ ಪ್ರದರ್ಶನದಿಂದ ನನಗೆ ತುಂಬಾ ಖುಷಿಯಾಗಿದೆ. ಯಾವಾಗಲೂ 70 ಇಲ್ಲವೇ 80 ರನ್ ಕೊಡುಗೆ ನೀಡಬೇಕೆಂದಿಲ್ಲ, 30-40 ರನ್ ಕೂಡ ನಿರ್ಣಾಯಕವಾಗುತ್ತದೆ. ರಾಹುಲ್ ಕ್ರೀಸ್ನಲ್ಲಿರುವಾಗ ಸ್ವತಃ ಶಾಂತವಾಗಿರುದಲ್ಲದೆ, ಡ್ರೆಸ್ಸಿಂಗ್ ರೂಮ್ನಲ್ಲಿ ಶಾಂತಿ ನೆಲೆಸಿರುತ್ತದೆ. ಅವರ ಕೊಡುಗೆಗಳಿಂದ ನನಗೆ ತುಂಬಾ ಸಂತೋಷವಾಗಿದೆ’’ ಎಂದರು.
ವಿಕೆಟ್ಕೀಪರ್-ಬ್ಯಾಟರ್ ಆಗಿ ತನ್ನ ಪಾತ್ರದ ಕುರಿತು ಮಾತನಾಡಿದ ರಾಹುಲ್, ‘‘ಕ್ರಿಕೆಟ್ ಒಂದು ಟೀಮ್ ಗೇಮ್. ತಂಡಕ್ಕೆ ಏನು ಅಗತ್ಯವಿದೆಯೋ ಅದನ್ನೇ ಮಾಡಬೇಕು ಎಂದು ನನ್ನ ಕೋಚ್ಗಳು ನನಗೆ ಕಲಿಸಿಕೊಟ್ಟಿದ್ದರು. ನಾವು ಯಾವುದೇ ಪಾತ್ರವನ್ನು ಸ್ವೀಕರಿಸಿ, ಕೊಡುಗೆ ನೀಡಲು ದಾರಿ ಹುಡುಕಬೇಕು. ಐಸಿಸಿ ಟೂರ್ನಿಗಳಲ್ಲಿ ಗೆಲುವು ಸುಲಭವಾಗಿ ದಕ್ಕುವುದಿಲ್ಲ’’ ಎಂದರು.