ಭಾರತ ಪರ ಏಕದಿನ ವಿಶ್ವಕಪ್ನಲ್ಲಿ ವೇಗದ ಶತಕ ದಾಖಲಿಸಿದ ಕೆ ಎಲ್ ರಾಹುಲ್
ರೋಹಿತ್ ವೇಗದ ಶತಕದ ದಾಖಲೆಯನ್ನು 2023ರ ವಿಶ್ವಕಪ್ನಲ್ಲೇ ಅಳಿಸಿ ಹಾಕಿದ ಕನ್ನಡಿಗ
Photo : x/bcci
ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ವಿಶ್ವಕಪ್ ನಲ್ಲಿ ಭಾರತ ಪರ ವೇಗದ ಶತಕ ದಾಖಲಿಸಿದರು.
ನೆದರ್ಲ್ಯಾಂಡ್ಸ್ ವಿರುದ್ಧ 62 ಎಸೆತಗಳಲಿ ಶತಕ ಬಾರಿಸಿದ ಕೆ ಎಲ್ ರಾಹುಲ್ ಸಿಕ್ಸರ್ ಬೌಂಡರಿ ಮೂಲಕ ಬೆಂಗಳೂರಿಗರಿಗೆ ದೀಪಾವಳಿ ಹಬ್ಬದ ಹಾಗೂ ವಾರಾಂತ್ಯದ ರಸದೌತಣ ನೀಡಿದರು. ಕಿಕ್ಕಿರಿದು ತುಂಬಿದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆಂಡನ್ನು ರಾಕೆಟ್ನಂತೆ ಹಾರಿಸಿದ ರಾಹುಲ್, ತಾವು ಆಡಿ ಬೆಳೆದ ಸ್ಟೇಡಿಯಂನಲ್ಲಿ ಭಾರತದ ಪರ ವೇಗದ ಶತಕದ ರಾಜನಾದರು. 11 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಿಡಿಮದ್ದು ಭಾರತಕ್ಕೆ ಭರ್ಜರಿ ಮುನ್ನಡೆ ನೀಡಿತು.
ಭಾರತದ ಪರ ಇದುವರೆಗೆ ವೇಗದ ಶತಕ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಅವರು 2023ರ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನದ ವಿರುದ್ಧ 63 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಕಪಿಲ್ ದೇವ್ 1983ರ ವಿಶ್ವಕಪ್ನಲ್ಲಿ ಝಿಂಬಾಬ್ವೆ ವಿರುದ್ಧ 72 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ವೀರೇಂದ್ರ ಸೆಹ್ವಾಗ್ 2007ರಲ್ಲಿ ಬರ್ಮುಡಾ ವಿರುದ್ಧ 81 ಎಸೆತಗಳಲ್ಲಿ ಸೆಂಚುರಿ ಹೊಡೆದಿದ್ದರು. ವಿರಾಟ್ ಕೊಹ್ಲಿ 2011ರ ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ 83 ಎಸೆತಗಳಲ್ಲಿ ನೂರು ರನ್ ಬಾರಿಸಿದ್ದರು. ಸಚಿನ್ ತೆಂಡೂಲ್ಕರ್ 1999ರಲ್ಲಿ ಕೀನ್ಯಾ ವಿರುದ್ಧ 84 ಎಸೆತಗಳಲ್ಲಿ ವೇಗದ ಶತಕ ದಾಖಲಿಸಿ ಸಾಧನೆ ಮಾಡಿದ್ದರು.