ಕೊಹ್ಲಿ ಇನ್ನು 58 ರನ್ ಗಳಿಸಿದರೆ 147 ವರ್ಷಗಳ ಐತಿಹಾಸಿಕ ದಾಖಲೆ
ಸಚಿನ್ ತೆಂಡುಲ್ಕರ್ , ವಿರಾಟ್ ಕೊಹ್ಲಿ | PC : NDTV
ಮುಂಬೈ : ಬಾಂಗ್ಲಾದೇಶದ ವಿರುದ್ಧದ ಭಾರತದ ಟೆಸ್ಟ್ ಸರಣಿಯು ಸೆಪ್ಟಂಬರ್ 19ರಂದು ಆರಂಭಗೊಳ್ಳಲಿದ್ದು, ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲೆ ನೆಲೆಸಿದೆ. 35 ವರ್ಷದ ಕೊಹ್ಲಿ ಈಗಾಗಲೇ ಅಂತರರಾಷ್ಟ್ರೀಯ ಟಿ20ಯಿಂದ ನಿವೃತ್ತಿಗೊಂಡಿದ್ದಾರೆ. ಅಂದರೆ ಅಭಿಮಾನಿಗಳಿಗೆ ಅವರು ಇನ್ನು ಕಾಣಸಿಗುವುದು ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಮಾತ್ರ.
ಕೊಹ್ಲಿ ಮತ್ತು ಸಚಿನ್ ತೆಂಡುಲ್ಕರ್ ನಡುವೆ ಹೋಲಿಕೆಗಳನ್ನು ಮಾಡುವ ಕೆಲಸವನ್ನು ಅಭಿಮಾನಿಗಳು ಮಾಡುತ್ತಲೇ ಬಂದಿದ್ದಾರೆ. ಆದರೆ, ಸಚಿನ್ ತೆಂಡುಲ್ಕರ್ಗೆ ಸಮಾನ ಯಾರೂ ಇಲ್ಲ ಎಂಬುದಾಗಿ ಕೊಹ್ಲಿ ಯಾವಾಗಲೂ ಹೇಳುತ್ತಾ ಬಂದಿದ್ದಾರೆ. ಕೊಹ್ಲಿ 80 ಅಂತರರಾಷ್ಟ್ರೀಯ ಶತಕಗಳನ್ನು ಹೊಂದಿದ್ದರೆ, ಸಚಿನ್ 100 ಅಂತರರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.
ಶತಕಗಳ ಸಂಖ್ಯೆಯಲ್ಲಿ ಸಚಿನ್ರನ್ನು ಹಿಂದಿಕ್ಕಲು ಕೊಹ್ಲಿಗೆ ಸ್ವಲ್ಪ ಸಮಯ ಬೇಕಾಗಬಹುದು. ಆದರೆ, ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯ ವೇಳೆ, ಸಚಿನ್ರ ವಿಶ್ವ ದಾಖಲೆಯೊಂದನ್ನು ಕೊಹ್ಲಿ ಮುರಿಯಲು ಅವಕಾಶವಿದೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 27,000 ರನ್ಗಳನ್ನು ಪೂರೈಸಲು ಕೊಹ್ಲಿಗೆ ಇನ್ನು 58 ರನ್ಗಳ ಅಗತ್ಯವಿದೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗವಾಗಿ 27,000 ರನ್ಗಳನ್ನು ಪೂರೈಸಿದ ದಾಖಲೆ ಸಚಿನ್ ಹೆಸರಿನಲ್ಲಿದೆ. ಅವರು 623 ಇನಿಂಗ್ಸ್ಗಳಲ್ಲಿ (226 ಟೆಸ್ಟ್ ಇನಿಂಗ್ಸ್ಗಳು, 396 ಏಕದಿನ ಇನಿಂಗ್ಸ್ಗಳು ಮತ್ತು ಒಂದು ಟಿ20ಐ ಇನಿಂಗ್ಸ್) 27,000 ರನ್ಗಳನ್ನು ಗಳಿಸಿದ್ದಾರೆ. ಕೊಹ್ಲಿ ಈಗಾಗಲೇ 591 ಇನಿಂಗ್ಸ್ಗಳಿಂದ 26,942 ರನ್ಗಳನ್ನು ಗಳಿಸಿದ್ದಾರೆ. ಅವರು ಇನ್ನು ಮುಂದಿನ 8 ಇನಿಂಗ್ಸ್ಗಳಲ್ಲಿ 58 ರನ್ಗಳನ್ನು ಗಳಿಸಿದರೆ, ಅಂತರರಾಷ್ಟ್ರೀಯ ಕ್ರಿಕೆಟ್ನ 147 ವರ್ಷಗಳ ಇತಿಹಾಸದಲ್ಲಿ 600ಕ್ಕೂ ಕಡಿಮೆ ಇನಿಂಗ್ಸ್ಗಳಲ್ಲಿ 27,000 ರನ್ಗಳನ್ನು ಪೂರೈಸಿದ ಮೊದಲ ಕ್ರಿಕೆಟಿಗ ಅವರಾಗುತ್ತಾರೆ.
ಈವರೆಗೆ, ಸಚಿನ್ರನ್ನು ಹೊರತುಪಡಿಸಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ 27,000 ರನ್ಗಳನ್ನು ಗಳಿಸಿದ್ದಾರೆ.
► ಆಫ್ರೊ-ಏಶ್ಯಾ ಕಪ್ಗೆ ಜೀವ?
ಈ ನಡುವೆ, ಆಫ್ರೊ-ಏಶ್ಯಾ ಕಪ್ ಪಂದ್ಯಾವಳಿಗೆ ಚಾಲನೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅದು ನಿಜವಾದರೆ, ಏಶ್ಯ ತಂಡದ ಪರವಾಗಿ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬಾಬರ್ ಅಝಮ್ ನಡುವೆ ಬ್ಯಾಟಿಂಗ್ ಜೊತೆಗಾರಿಕೆ ನಡೆಯಬಹುದು ಮತ್ತು ಶಹೀನ್ ಅಫ್ರಿದಿ ಮತ್ತು ಜಸ್ಪ್ರೀತ್ ಬುಮ್ರಾ ಎರಡು ಬದಿಗಳಲ್ಲಿ ಪೂರಕವಾಗಿ ಬೌಲಿಂಗ್ ಮಾಡಬಹುದು.
‘ಫೋರ್ಬ್ಸ್’ ವರದಿಯೊಂದರ ಪ್ರಕಾರ, ಆಫ್ರೊ-ಏಶ್ಯ ಕಪ್ಗೆ ಜೀವ ತುಂಬುವ ಸಾಧ್ಯತೆಯ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತಿದೆ.
‘‘ಅದು (ಆಫ್ರೊ-ಏಶ್ಯ ಕಪ್) ಸಂಭವಿಸಿಲ್ಲ ಎಂಬ ಕಾರಣಕ್ಕೆ ನನಗೆ ತುಂಬಾ ನೋವಾಗಿದೆ’’ ಎಂದು ‘ಫೋರ್ಬ್ಸ್’ನೊಂದಿಗೆ ಮಾತನಾಡಿದ ಆಫ್ರಿಕನ್ ಕ್ರಿಕೆಟ್ ಅಸೋಸಿಯೇಶನ್ (ಎಸಿಎ)ನ ಮಾಜಿ ಅಧ್ಯಕ್ಷ ಸುಮೋದ್ ದಾಮೋದರ್ ಹೇಳಿದರು.
‘‘ಇದಕ್ಕೆ ಬೇಕಾದಷ್ಟು ಉತ್ಸಾಹ ಎಸಿಎಯಲ್ಲಿ ಇಲ್ಲ. ಆದರೆ, ಅದರ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ. ತಿಳುವಳಿಕೆಯ ಕೊರತೆಯಿಂದಾಗಿ ಹಾಗೆ ಆಗಿದೆಯೇ ಹೊರತು, ಆ ಪರಿಕಲ್ಪನೆಗೆ ಬೆಂಬಲವಿಲ್ಲದೆ ಅಲ್ಲ ಎಂದು ನನಗೆ ಅನಿಸುತ್ತದೆ. ನಮ್ಮ ಸದಸ್ಯರು ಅದಕ್ಕಾಗಿ ವಿಷಾದಿಸುತ್ತಿದ್ದಾರೆ. ಈ ವಿಷಯದಲ್ಲಿ ಆಫ್ರಿಕ ಮುತುವರ್ಜಿ ವಹಿಸಬೇಕು’’ ಎಂದು ಅವರು ಅಭಿಪ್ರಾಯಪಟ್ಟರು.