ಅಪಹಾಸ್ಯ ಮಾಡಿದ್ದಕ್ಕೆ ಮ್ಯಾಕ್ಸ್ ವೆಲ್ ಗೆ ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದ ಕೊಹ್ಲಿ!
ವಿರಾಟ್ ಕೊಹ್ಲಿ , ಮ್ಯಾಕ್ಸ್ ವೆಲ್ | PC : X
ಹೊಸದಿಲ್ಲಿ : ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ತನ್ನ ಗೆಳೆತನದ ಬಗ್ಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದು, 2017ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳೆ ಭುಜಕ್ಕೆ ಗಾಯಗೊಂಡಿದ್ದ ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ್ದಕ್ಕೆ ಅವರು ನನ್ನನ್ನು ಇನ್ಸ್ಟಾಗ್ರಾಂ ನಲ್ಲಿ ಬ್ಲಾಕ್ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ.
2021ರಲ್ಲಿ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರುವವರೆಗೂ ಕೊಹ್ಲಿ ಮತ್ತು ನಾನು ಉತ್ತಮ ಸ್ನೇಹಿತರೇ ಆಗಿರಲಿಲ್ಲ. ನಾನು ಕೊಹ್ಲಿಯನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಪ್ರಯತ್ನಿಸಿದೆ. ಆದರೆ, ಈ ವೇಳೆ ಕೊಹ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ ಎಂದು ನನಗೆ ತಿಳಿಯಿತು ಎಂದು ಮ್ಯಾಕ್ಸ್ವೆಲ್ ʼWillow Talk podcastʼ ನಲ್ಲಿ ಹೇಳಿದ್ದಾರೆ.
ನನ್ನನ್ನು ಆರ್ಸಿಬಿ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿದಾಗ ವಿರಾಟ್ ಕೊಹ್ಲಿ ನನ್ನನ್ನು ಸ್ವಾಗತಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ನಾನು ಐಪಿಎಲ್ ಪಂದ್ಯಕ್ಕೆ ಮೊದಲು ತರಬೇತಿಗೆ ಬಂದಾಗ, ನಾವು ಜೊತೆಯಾಗಿ ಸಮಯವನ್ನು ಕಳೆದಿದ್ದೇವೆ ಎಂದು ಹೇಳಿದ್ದಾರೆ.
ನಾನು ಅವರನ್ನು ಫಾಲೋ ಮಾಡಲು ಅವರ ಸಾಮಾಜಿಕ ಜಾಲತಾಣ ಖಾತೆಯನ್ನು ಪರಿಶೀಲಿಸಿದೆ. ಅವರ ಖಾತೆ ಏಕೆ ಕಂಡು ಬರುತ್ತಿಲ್ಲ ಎಂದು ನಿಜವಾಗಿಯೂ ಗೊತ್ತಾಗಿಲ್ಲ. ಅವರು ನಿಮ್ಮನ್ನು ನಿರ್ಬಂಧಿಸಿರಬಹುದು, ಆದ್ದರಿಂದ ನಿಮಗೆ ಅವರ ಖಾತೆ ಸಿಗುತ್ತಿಲ್ಲ ಎಂದು ಕೆಲವರು ಹೇಳಿದ್ದಾರೆ. ನಾನು ಖಂಡಿತವಾಗಿಯೂ ಇಲ್ಲ ಎಂದಿದ್ದೆ. 2017ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ, ಫೀಲ್ಡಿಂಗ್ ಮಾಡುವಾಗ ಕೊಹ್ಲಿ ಭುಜಕ್ಕೆ ಗಾಯವಾಗಿತ್ತು ಎಂದು ಹೇಳಿದ್ದಾರೆ.
ನಾನು ಕೊಹ್ಲಿ ಬಳಿ ಇನ್ಸ್ಟಾಗ್ರಾಂನಲ್ಲಿ ನನ್ನನ್ನು ಬ್ಲಾಕ್ ಮಾಡಿದ್ದೀರಾ ಎಂದು ಕೇಳಿದೆ. ಅವರು ಹೌದು ಎಂದು ಹೇಳಿದ್ದಾರೆ. ಆ ಟೆಸ್ಟ್ ಪಂದ್ಯದ ಸಮಯದಲ್ಲಿ ನೀವು ನನ್ನನ್ನು ಅಪಹಾಸ್ಯ ಮಾಡಿದಾಗ ನಿಮ್ಮನ್ನು ಬ್ಲಾಕ್ ಮಾಡಲು ನಿರ್ಧರಿಸಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ. ಅವರು ನನ್ನನ್ನು ಆ ಬಳಿಕ ಅನ್ ಬ್ಲಾಕ್ ಮಾಡಿದ್ದಾರೆ. ಅದರ ನಂತರ ನಾವು ಉತ್ತಮ ಸ್ನೇಹಿತರಾಗಿದ್ದೇವೆ. ನಾವು ಸಾಕಷ್ಟು ಅವಿನಾಭಾವ ಸಂಬಂಧವನ್ನು ಹೊಂದಿದ್ದೇವೆ. ಅಂದಿನಿಂದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು RCBನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.