ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 13 ಸಾವಿರ ರನ್ ಪೂರೈಸಿದ ಕೊಹ್ಲಿ
77ನೇ ಅಂತರ್ರಾಷ್ಟ್ರೀಯ ಶತಕ ಸಿಡಿಸಿದ ಸ್ಟಾರ್ ಬ್ಯಾಟರ್
ವಿರಾಟ್ ಕೊಹ್ಲಿ Photo: twitter/@BCCI
ಕೊಲಂಬೊ: ಏಶ್ಯಕಪ್ನ ಆರಂಭಿಕ ಪಂದ್ಯದಲ್ಲಿನ ಫ್ಲಾಪ್ ಶೋಯಿಂದ ಹೊರ ಬಂದಿರುವ ಭಾರತದ ಅಗ್ರ ಸರದಿಯ ಬ್ಯಾಟರ್ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಸೋಮವಾರ ನಡೆದ ಸೂಪರ್-4 ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿದ್ದಾರೆ.
ಕೇವಲ 84 ಎಸೆತಗಳಲ್ಲಿ 47ನೇ ಶತಕವನ್ನು ಸಿಡಿಸಿರುವ ಕೊಹ್ಲಿ ಏಕದಿನ ಮಾದರಿ ಕ್ರಿಕೆಟ್ನಲ್ಲಿ ವೇಗವಾಗಿ 13,000 ರನ್ ಪೂರೈಸಿದ ಸಾಧನೆಯನ್ನೂ ಮಾಡಿದ್ದಾರೆ. ಕೊಹ್ಲಿ ತನ್ನ 267ನೇ ಇನಿಂಗ್ಸ್ನಲ್ಲಿ 13 ಸಾವಿರ ರನ್ ಮೈಲಿಗಲ್ಲು ತಲುಪಿದರು. ಸಚಿನ್ ತೆಂಡುಲ್ಕರ್ 321, ರಿಕಿ ಪಾಂಟಿಂಗ್ 341, ಕುಮಾರ ಸಂಗಕ್ಕರ 363 ಹಾಗೂ ಸನತ್ ಜಯಸೂರ್ಯ 416ನೇ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದರು.
ಕೊಹ್ಲಿ ಇದೀಗ ಏಕದಿನ ಕ್ರಿಕೆಟ್ನಲ್ಲಿ 13,000 ರನ್ ಪೂರೈಸಿದ ವಿಶ್ವದ ಐದನೇ ಬ್ಯಾಟರ್ ಆಗಿದ್ದಾರೆ. ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡುಲ್ಕರ್(18,426 ರನ್), ಶ್ರೀಲಂಕಾದ ಕುಮಾರ ಸಂಗಕ್ಕರ(14,234 ರನ್), ಆಸ್ಟ್ರೇಲಿಯದ ದಿಗ್ಗಜ ರಿಕಿ ಪಾಂಟಿಂಗ್(13,704 ರನ್) ಹಾಗೂ ಲಂಕಾದ ಸನತ್ ಜಯಸೂರ್ಯ(13,430 ರನ್)ವಿಶೇಷ ಕ್ಲಬ್ನಲ್ಲಿರುವ ಇತರ ಬ್ಯಾಟರ್ಗಳಾಗಿದ್ದಾರೆ.
ಮಳೆಬಾಧಿತ ಪಂದ್ಯದಲ್ಲಿ ಕೊಹ್ಲಿ ಅವರು ತಂಡಕ್ಕೆ ಪುನರಾಗಮನ ಮಾಡಿರುವ ರಾಹುಲ್ ಜೊತೆ 3ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 233 ರನ್ ಜೊತೆಯಾಟ ನಡೆಸಿದರು. ಇದು ಏಶ್ಯಕಪ್ನಲ್ಲಿ ದಾಖಲಾಗಿರುವ ಗರಿಷ್ಠ ರನ್ ಜೊತೆಯಾಟವಾಗಿದೆ.
ಪಾಕಿಸ್ತಾನ ಬೌಲರ್ಗಳನ್ನು ಬೆಂಡೆತ್ತಿದ ಕೊಹ್ಲಿ 119.05ರ ಸ್ಟ್ರೈಕ್ರೇಟ್ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಭಾರತದ 3ನೇ ಕ್ರಮಾಂಕದ ಬ್ಯಾಟರ್ 94 ಎಸೆತಗಳಲ್ಲಿ ಔಟಾಗದೆ 122 ರನ್ ಗಳಿಸಿದರು.
ಕೊಹ್ಲಿ 2023ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಕೊನೆಯ ಬಾರಿ ಶತಕ ಸಿಡಿಸಿದ್ದರು. ತಿರುವನಂತಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊಹ್ಲಿ ಔಟಾಗದೆ 166 ರನ್ ಗಳಿಸಿದ್ದರು.
ಕೊಹ್ಲಿ ಅವರು ಏಶ್ಯಕಪ್ನ ಏಕದಿನ ಪಂದ್ಯದಲ್ಲಿ ಗರಿಷ್ಠ ಶತಕ ಸಿಡಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಒಟ್ಟು 4 ಶತಕ ಗಳಿಸಿದ್ದರೆ ಆರು ಶತಕ ಗಳಿಸಿರುವ ಜಯಸೂರ್ಯ ಮೊದಲ ಸ್ಥಾನದಲ್ಲಿದ್ದಾರೆ. ಕುಮಾರ ಸಂಗಕ್ಕರ(4)ಹಾಗೂ ಶುಐಬ್ ಮಲಿಕ್(3) ಆನಂತರದ ಸ್ಥಾನದಲ್ಲಿದ್ದಾರೆ