ದಾಖಲೆಗಳ ʻಕಿಂಗ್ʻ ಕೊಹ್ಲಿ
ವಿರಾಟ್ ಕೊಹ್ಲಿ
ಚೆನ್ನೈ : ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ನ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ 75 ಎಸೆತಗಳಲ್ಲಿ ಅರ್ಧ ಪೂರೈಸಿದರು. ಇದರೊಂದಿಗೆ ಕೊಹ್ಲಿ ಹಲವು ದಾಖಲೆಗಳ ಸರದಾರ ಎನಿಸಿದರು.
11 ಸಾವಿರ ರನ್: ಏಕದಿನ ಕ್ರಿಕೆಟಿನಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 11 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.
ಅತ್ಯಧಿಕ ಅರ್ಧಶತಕ: ಆರಂಭಿಕ ಬ್ಯಾಟರ್ ಗಳನ್ನು ಹೊರತು ಪಡಿಸಿ ಏಕದಿನ ಕ್ರಿಕೆಟಿನಲ್ಲಿ ಅತ್ಯಧಿಕ ಅರ್ಧಶತಕ ಗಳಿಸಿದ ಬ್ಯಾಟರ್ ಎಂಬ ದಾಖಲೆ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಕುಮಾರ ಸಂಗಾಕ್ಕಾರ ಹೆಸರಿನಲ್ಲಿತ್ತು. ಸಂಗಾಕ್ಕರ 369 ಇನಿಂಗ್ಸ್ ಗಳಲ್ಲಿ 112 ಬಾರಿ ಅರ್ಧ ಗಳಿಸಿದ್ದರು. ಕೊಹ್ಲಿ 262 ಇನಿಂಗ್ಸ್ ಗಳಲ್ಲಿ 113 ಅರ್ಧ ಶತಕ ಗಳಿಸಿದ ಇತಿಹಾಸ ಬರೆದಿದ್ದಾರೆ.
ವಿಶ್ವಕಪ್ ನಲ್ಲಿ 2ನೇ ಅತ್ಯಧಿಕ ರನ್: ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ ನಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 2278 ರನ್ ಕಲೆಹಾಕಿರುವ ಸಚಿನ್ ಅಗ್ರಸ್ಥಾನದಲ್ಲಿದ್ದರೆ, 1115 ರನ್ ಗಳಿಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.