ಸತತ ಬ್ಯಾಟಿಂಗ್ ವೈಫಲ್ಯದ ನಡುವೆಯೂ ದಾಖಲೆ ನಿರ್ಮಿಸಿದ ಕೊಹ್ಲಿ!
PC: x.com/_TeamGreen123
ಹೊಸದಿಲ್ಲಿ: ಪ್ರಸಕ್ತ ಟಿ20 ವಿಶ್ವಕಪ್ ನಲ್ಲಿ ಇದುವರೆಗೆ ಎಲ್ಲ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಾ ಬಂದ ಭಾರತದ ಸ್ಟಾರ್ ಬ್ಯಾಟ್ಸ್ಮನ್ ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 28 ಎಸೆತಗಳಲ್ಲಿ 37 ರನ್ ಗಳಿಸಿ ಗಮನ ಸೆಳೆದರು. ಜತೆಗೆ ಟಿ20 ಮತ್ತು 50 ಓವರ್ ಗಳ ಪಂದ್ಯಗಳೆರಡರಲ್ಲೂ 3000 ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ನಿರ್ಮಿಸಿದರು.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ಗಳನ್ನು ಒಳಗೊಂಡಂತೆ 132.14 ಸ್ಟ್ರೈಕ್ ರೇಟ್ ನಲ್ಲಿ 37 ರನ್ ಗಳಿಸಿದರು. ಐಸಿಸಿ ಟಿ20 ಪಂದ್ಯಾವಳಿಯಲ್ಲಿ ಅಸಾಧಾರಣ ದಾಖಲೆ ಹೊಂದಿರುವ ಕೊಹ್ಲಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 32 ಪಂದ್ಯಗಳ 30 ಇನಿಂಗ್ಸ್ ಗಳಲ್ಲಿ 1207 ರನ್ ಹೊಡೆದಿರುವ ಅವರು 63.52 ಸರಾಸರಿ ಹೊಂದಿದ್ದಾರೆ ಮತ್ತು ಸ್ಟ್ರೈಕ್ ರೇಟ್ 129.78ರಷ್ಟಿದೆ.
11 ಬಾರಿ ಅಜೇಯರಾಗಿ ಉಳಿದಿರುವ ಅವರು 14 ಅರ್ಧಶತಕಗಳನ್ನು ಗಳಿಸಿದ್ದಾರೆ. ಟಿ20 ಟೂರ್ನಿಯಲ್ಲಿ ಅವರ ಗರಿಷ್ಠ ಸ್ಕೋರ್ 89 ನಾಟೌಟ್. 2014 ಮತ್ತು 2016ರಲ್ಲಿ ಅವರು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
2014ರ ಟಿ20 ವಿಶ್ವಕಪ್ ಕೊಹ್ಲಿಯವರ ಅತ್ಯಂತ ಯಶಸ್ವಿ ಟೂರ್ನಿ ಎನಿಸಿದ್ದು, ಆರು ಪಂದ್ಯಗಳಿಂದ 106.33 ಸರಾಸರಿಯಲ್ಲಿ 319 ರನ್ ಕಲೆ ಹಾಕಿದ್ದರು. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿದ್ದು, 129.15 ಸ್ಟ್ರೈಕ್ ರೇಟ್ ಹೊಂದಿದ್ದರು. ಆದರೆ ಈ ಟೂರ್ನಿಯಲ್ಲಿ ಐದು ಪಂದ್ಯಗಳಲ್ಲಿ ಕೇವಲ 66 ರನ್ ಗಳಿಸಿದ್ದಾರೆ. ಶನಿವಾರ ಗಳಿಸಿದ 37 ರನ್ ಈ ಟೂರ್ನಿಯಲ್ಲಿ ಅವರ ಗರಿಷ್ಠ ಸ್ಕೋರ್ ಆಗಿದೆ.
50 ಓವರ್ ಗಳ ವಿಶ್ವಕಪ್ ನಲ್ಲೂ ಕೊಹ್ಲಿ ಅದ್ಭುತ ಪ್ರದರ್ಶ ನೀಡಿದ್ದು, ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. 37 ಪಂದ್ಯಗಳಲ್ಲಿ ಅವರು 59.83 ಸರಾಸರಿಯೊಂದಿಗೆ 1795 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 12 ಅರ್ಧಶತಕಗಳು ಸೇರಿದ್ದು, ಗರಿಷ್ಠ 117 ರನ್ ಗಳಿಸಿದ್ದಾರೆ.
2023ರ ವಿಶ್ವಕಪ್ ಇವರ ಅತ್ಯಂತ ಯಶಸ್ವಿ ಟೂರ್ನಿ ಎನಿಸಿದ್ದು, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ 765 ರನ್ ಗಳಿಸಿದ ಅವರ ಸರಾಸರಿ 95ಕ್ಕಿಂತ ಅಧಿಕವಾಗಿತ್ತು. ಮೂರು ಶತಕ ಹಾಗೂ ಆರು ಅರ್ಧಶತಕಗಳನ್ನು ಅವರು ಬಾರಿಸಿದ್ದರು.