ಕೌಟುಂಬಿಕ ತುರ್ತು ಕಾರಣಗಳಿಗಾಗಿ ದಕ್ಷಿಣ ಆಫ್ರಿಕಾದಿಂದ ತವರಿಗೆ ಮರಳಿದ ವಿರಾಟ್ ಕೊಹ್ಲಿ: ವರದಿ
ಮುಂಬೈ: ದಕ್ಷಿಣ ಆಫ್ರಿಕಾ ತಂಡದೆದುರು ಎರಡು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಕೌಟುಂಬಿಕ ತುರ್ತು ಕಾರಣಗಳಿಗಾಗಿ ಭಾರತದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಿಂದ ತವರಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.
ಪ್ರಿಟೋರಿಯಾದಲ್ಲಿ ಗುರುವಾರ ನಡೆದ ಮೂರನೆ ಹಾಗೂ ಅಂತಿಮ ಪಂದ್ಯದ ತಂಡದಲ್ಲಿ ವಿರಾಟ್ ಕೊಹ್ಲಿ ಇರಲಿಲ್ಲ. ಅವರು ತಂಡದ ಆಡಳಿತ ಮಂಡಳಿಯ ಅನುಮತಿ ಪಡೆದು ಮೂರು ದಿನಗಳ ಹಿಂದೆ ಮುಂಬೈಗೆ ಮರಳಿದ್ದರು.
ಯಾವ ಕೌಟುಂಬಿಕ ತುರ್ತು ಕಾರಣಕ್ಕಾಗಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿದರು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಿದ್ದರೂ, ಅವರು ಡಿಸೆಂಬರ್ 22ರಂದು ಮತ್ತೆ ದಕ್ಷಿಣ ಆಫ್ರಿಕಾಗೆ ಮರಳಲಿದ್ದಾರೆ ಎಂದು Crickbuzz ವರದಿ ಮಾಡಿದೆ.
ಇದಕ್ಕೂ ಮುನ್ನ, ಟಿ-20 ಸರಣಿ ಹಾಗೂ ಏಕದಿನ ಪಂದ್ಯಗಳ ಸರಣಿಗಳಿಂದ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಮಳೆಯ ಕಾರಣಕ್ಕೆ ಟಿ-20 ಸರಣಿಯು 1-1ರಲ್ಲಿ ಸಮಬಲವಾದರೆ, ಗುರುವಾರ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡವು ಗೆಲುವು ಸಾಧಿಸುವ ಮೂಲಕ 2-1 ಅಂತರದಲ್ಲಿ ಏಕದಿನ ಪಂದ್ಯಗಳ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು. ಇದು ದಕ್ಷಿಣ ಆಫ್ರಿಕಾದಲ್ಲಿ ಈವರೆಗೆ ನಡೆದಿರುವ ಏಕದಿನ ಪಂದ್ಯಗಳ ಸರಣಿಗಳ ಪೈಕಿ ಭಾರತ ತಂಡವು ಜಯಿಸಿದ ಎರಡನೆ ಸರಣಿಯಾಗಿದೆ.