ನಿವೃತ್ತಿಯ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಕೊಹ್ಲಿ, ರೋಹಿತ್ ಗಿದೆ: ಯುವರಾಜ್ ಸಿಂಗ್
ಕೊಹ್ಲಿ, ರೋಹಿತ್ , ಯುವರಾಜ್ ಸಿಂಗ್ | PC : ANI
ಹೊಸದಿಲ್ಲಿ : ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಬಳಿಕ, ಹಿರಿಯ ಬ್ಯಾಟರ್ ಗಳಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಬಗ್ಗೆ ಯೋಚಿಸಬೇಕು ಎಂದು ಮಾಜಿ ಭಾರತೀಯ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ವಿಶ್ವಕಪ್ಗೆ ಪೂರ್ವಭಾವಿಯಾಗಿ, ಭಾರತೀಯ ಕ್ರಿಕೆಟ್ ತಂಡದಲ್ಲಿ ಕೊಹ್ಲಿ ಮತ್ತು ರೋಹಿತ್ರ ಭವಿಷ್ಯದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಅವರಿಬ್ಬರೂ ಈ ವರ್ಷದ ಜನವರಿಯಲ್ಲಿ ಭಾರತದಲ್ಲಿ ನಡೆದ ಅಫ್ಘಾನಿಸ್ತಾನದ ವಿರುದ್ಧದ ಟಿ20 ಸರಣಿಗಿಂತ ಮೊದಲು, ಒಂದು ವರ್ಷಕ್ಕೂ ಅಧಿಕ ಕಾಲ ಅಂತರ್ರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ.
ಆದರೆ, ತಮ್ಮ ಭವಿಷ್ಯದ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಕೊಹ್ಲಿ ಮತ್ತು ರೋಹಿತ್ ಸಂಪಾದಿಸಿಕೊಂಡಿದ್ದಾರೆ ಎಂದು ಹೇಳಿದ ಯುವರಾಜ್, ಯುವ ಆಟಗಾರರು ಮುಂದೆ ಬಂದು ತಂಡದಲ್ಲಿ ತಮ್ಮ ಸ್ಥಾನಗಳನ್ನು ಕೇಳಲು ಇದು ಸರಿಯಾದ ಸಮಯವಾಗಿದೆ ಎಂದು ಅಭಿಪ್ರಾಯಪಟ್ಟರು.
“ವಯಸ್ಸಾಗುತ್ತಿದ್ದಂತೆಯೇ, ಜನರು ಆಟಗಾರರ ಪ್ರಾಯದ ಬಗ್ಗೆ ಮಾತನಾಡುತ್ತಾರೆ ಮತ್ತು ನಿಮ್ಮ ಸಾಧನೆಗಳನ್ನು ಅವರು ಮರೆಯುತ್ತಾರೆ. ಈ ಇಬ್ಬರು ಆಟಗಾರರು ಭಾರತದ ಶ್ರೇಷ್ಠ ಆಟಗಾರರು. ತಮಗೆ ಬೇಕಾದಾಗ ನಿವೃತ್ತಿ ಹೊಂದುವ ಹಕ್ಕನ್ನು ಅವರು ಹೊಂದಿದ್ದಾರೆ’’ ಎಂದು 2024ರ ಟಿ20 ವಿಶ್ವಕಪ್ನ ರಾಯಭಾರಿಯಾಗಿ ಆಯ್ಕೆಯಾಗಿರುವ ಯುವರಾಜ್ ಸಿಂಗ್ ಹೇಳಿದರು.
ಕ್ರಿಕೆಟ್ನ ಎಲ್ಲಾ ಮೂರು ಮಾದರಿಗಳಲ್ಲಿ ಆಡುತ್ತಿರುವುದು ಕೊಹ್ಲಿ ಮತ್ತು ರೋಹಿತ್ರ ಮೇಲೆ ಪರಿಣಾಮ ಬೀರಿದೆ. ಅವರು ಈಗ ತಮ್ಮ ಕ್ರೀಡಾ ಬದುಕಿನ ಉತ್ತರಾರ್ಧದಲ್ಲಿ ಇದ್ದಾರೆ ಎಂದರು.
“ಟಿ20 ಮಾದರಿಯ ಕ್ರಿಕೆಟ್ನಲ್ಲಿ ಹೆಚ್ಚು ಯುವ ಆಟಗಾರರನ್ನು ನೋಡಲು ನಾನು ಇಚ್ಛಿಸುತ್ತೇನೆ. ಯಾಕೆಂದರೆ ಇದು 50 ಓವರ್ ಗಳ ಕ್ರಿಕೆಟ್ ಮತ್ತು ಟೆಸ್ಟ್ ಪಂದ್ಯಗಳನ್ನು ಆಡುವಾಗ ಹಿರಿಯ ಆಟಗಾರರ ಮೇಲಿನ ಹೊರೆಯನ್ನು ಇದು ತೆಗೆಯುತ್ತದೆ’’ ಎಂದು ಯುವರಾಜ್ ಸಿಂಗ್ ಹೇಳಿದರು.