‘ನೋಬಾಲ್’ ಕೊಡದ ಅಂಪಯರ್ ವಿರುದ್ಧ ಕೊಹ್ಲಿ ಆಕ್ರೋಶ
ವಿರಾಟ್ ಕೊಹ್ಲಿ | PC : PTI
ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗುರುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ‘ನೋಬಾಲ್’ ಕೊಡದ ಮೈದಾನದ ಅಂಪಯರ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ತಂಡದ ಆಟಗಾರ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ ಸಿ ಬಿ ಇನಿಂಗ್ಸ್ನ ಕೊನೆಯ ಓವರ್ ನಲ್ಲಿ, ಸೊಂಟದ ಎತ್ತರದ ಎಸೆತಕ್ಕೆ ಬ್ಯಾಟರ್ ದಿನೇಶ್ ಕಾರ್ತಿಕ್ಗೆ ನೋಬಾಲ್ ಕೊಡಲು ಅಂಪಯರ್ ನಿರಾಕರಿಸಿದರು. ಆಕಾಶ್ ಮದ್ವಲ್ ಎಸೆದ ಆ ಚೆಂಡು ‘ನೋಬಾಲ್’ ಆಗಿದೆ ಎಂದು ಪ್ರತಿಪಾದಿಸಿ ಮರುಪರಿಶೀಲನೆ (ರಿವ್ಯೂ)ಗೆ ಮನವಿ ಸಲ್ಲಿಸಲು ಬ್ಯಾಟರ್ ಮುಂದಾದರು.
ಸೊಂಟದ ಎತ್ತರಕ್ಕೆ ಬಂದ ಫುಲ್ಟಾಸ್ ಎಸೆತವನ್ನು ದಿನೇಶ್ ಕಾರ್ತಿಕ್ ಆಡಿದರು. ಅಂಪಯರ್ ‘ನೋಬಾಲ್’ ಸೂಚನೆ ನೀಡದಿರುವುದನ್ನು ಗಮನಿಸಿ ಅವರು ಮರುಪರಿಶೀಲನೆಗೆ ಮನವಿ ಸಲ್ಲಿಸಿದರು. ಚೆಂಡು ಸೊಂಟದಿಂದ ಸ್ವಲ್ಪ ಎತ್ತರದಲ್ಲಿ ಹಾದು ಹೋಯಿತು ಎನ್ನುವುದನ್ನು ವೀಡಿಯೊ ರಿಪ್ಲೇಗಳು ತೋರಿಸಿದವು. ಆದರೂ, ಅಂಪಯರ್ ‘ನೋಬಾಲ್’ ಸೂಚನೆ ನೀಡದಿರುವುದು ಕೊಹ್ಲಿಯ ಅಚ್ಚರಿಗೆ ಕಾರಣವಾಯಿತು. ಇದೇ ಅತೃಪ್ತಿಯನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರೂ ವ್ಯಕ್ತಪಡಿಸಿದರು.
ಆರ್ ಸಿ ಬಿಯ ಇನಿಂಗ್ಸ್ ಮುಕ್ತಾಯದ ಬಳಿಕ, ಕೊಹ್ಲಿ ಮೈದಾನದ ಅಂಪಯರ್ ಗಳ ಜೊತೆಗೆ ಬಿರುಸಿನ ಮಾತುಕತೆ ನಡೆಸಿರುವ ವೀಡಿಯೊವೊಂದು ವೈರಲ್ ಆಗಿದೆ. ಆದರೆ, ಯಾವ ವಿಷಯದ ಬಗ್ಗೆ ಚರ್ಚೆ ನಡೆದಿದೆ ಎನ್ನುವುದು ಖಚಿತಗೊಂಡಿಲ್ಲ.
ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ತಂಡವನ್ನು 7 ವಿಕೆಟ್ಗಳ ಭರ್ಜರಿ ಅಂತರದಿಂದ ಸೋಲಿಸಿದೆ. 197 ರನ್ಗಳ ವಿಜಯದ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತಿದ ಮುಂಬೈ ಇಂಡಿಯನ್ಸ್, ಕೇವಲ 3 ವಿಕೆಟ್ಗಳನ್ನು ಕಳೆದುಕೊಂಡು 199 ರನ್ಗಳನ್ನು ಗಳಿಸಿ ವಿಜಯವನ್ನು ಘೋಷಿಸಿತು. ಇಶಾನ್ ಕಿಶನ್ 69, ರೋಹಿತ್ ಶರ್ಮ 38, ಸೂರ್ಯಕುಮಾರ್ 52 ಮತ್ತು ಹಾರ್ದಿಕ್ ಪಾಂಡ್ಯ 21 (ಅಜೇಯ) ರನ್ಗಳನ್ನು ಗಳಿಸಿದರು.