ವಿವಾದಿತ ಅನಿಲ ಕ್ಷೇತ್ರದ ಮೇಲೆ ಸಂಪೂರ್ಣ ಹಕ್ಕು ಸಾಧಿಸಿದ ಕುವೈಟ್, ಸೌದಿ
ರಿಯಾದ್: ಇರಾನ್ ಕೂಡಾ ಹಕ್ಕು ಸಾಧಿಸುತ್ತಿರುವ ವಿವಾದಿತ ಅನಿಲ ಕ್ಷೇತ್ರದ ಮೇಲೆ ತಾವು ಮಾತ್ರ ಸಂಪೂರ್ಣ ಸಾರ್ವಭೌಮ ಹಕ್ಕನ್ನು ಹೊಂದಿರುವುದಾಗಿ ಸೌದಿ ಅರೆಬಿಯಾ ಮತ್ತು ಕುವೈಟ್ ಗುರುವಾರ ಹೇಳಿವೆ.
ಇರಾನ್‍ನಲ್ಲಿ ಅರಾಷ್, ಕುವೈಟ್ ಮತ್ತು ಸೌದಿಯಲ್ಲಿ ಡೊರ್ರಾ ಎಂದು ಹೆಸರಿಸಲಾದ ಈ ವಿವಾದಿತ ಅನಿಲ ಕ್ಷೇತ್ರವು ಇರಾನ್, ಕುವೈಟ್ ಮತ್ತು ಸೌದಿ ಅರೆಬಿಯಾ ನಡುವಿನ ತಟಸ್ಥ ವಲಯದಲ್ಲಿರುವ ಕಡಲಾಚೆಯ ನೈಸರ್ಗಿಕ ಅನಿಲ ಕ್ಷೇತ್ರವಾಗಿದೆ. ಇದಕ್ಕೆ ಸಂಬಂಧಿಸಿ 1960ರಿಂದಲೂ ವಿವಾದ ತಲೆದೋರಿದೆ. 1960ರಲ್ಲಿ ಈ ಅನಿಲ ಕ್ಷೇತ್ರದಲ್ಲಿ ಉತ್ಪಾದನೆ ಆರಂಭಿಸಲು ಇರಾನ್ ಮತ್ತು ಕುವೈಟ್ ಎರಡೂ ದೇಶಗಳು ವಿಭಿನ್ನ ಸಂಸ್ಥೆಗಳಿಗೆ ಅನುಮತಿ ನೀಡುವುದರೊಂದಿಗೆ ವಿವಾದ ಉಲ್ಬಣಿಸಿತ್ತು. ಈ ಅನಿಲ ಕ್ಷೇತ್ರವನ್ನು ಜಂಟಿಯಾಗಿ ಅಭಿವೃದ್ಧಿಗೊಳಿಸುವ ಬಗ್ಗೆ ಕಳೆದ ವರ್ಷ ಕುವೈಟ್ ಮತ್ತು ಸೌದಿ ಅರೆಬಿಯಾ ಒಪ್ಪಂದ ಮಾಡಿಕೊಂಡಿವೆ. ಇದು ಅಕ್ರಮ ಎಂದು ಇರಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಶ್ರೀಮಂತ ನೈಸರ್ಗಿಕ ಅನಿಲ ಸಂಪತ್ತಿನ ಕ್ಷೇತ್ರದ ಗಡಿ ಗುರುತಿಸುವಿಕೆಗಾಗಿ ಇರಾನ್ ಮತ್ತು ಕುವೈಟ್ ಮಧ್ಯೆ ನಡೆದ ಮಾತುಕತೆ ವಿಫಲವಾಗಿದೆ. ಈ ಮಧ್ಯೆ, ಒಪ್ಪಂದ ಏರ್ಪಡದಿದ್ದರೂ ಅನಿಲ ಹೊರತೆಗೆಯುವ ಕಾರ್ಯ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಕಳೆದ ರವಿವಾರ ಇರಾನ್‍ನ ತೈಲ ಸಚಿವರು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ `ಈ ಕ್ಷೇತ್ರದಿಂದ ನೈಸರ್ಗಿಕ ಅನಿಲವನ್ನು ಹೊರತೆಗೆಯುವ ಸಂಪೂರ್ಣ ಸಾರ್ವಭೌಮ ಅಧಿಕಾರ ತಮಗೆ ಮಾತ್ರ ಇದೆ . ಸಮಸ್ಯೆಯನ್ನು ಇತ್ಯರ್ಥಪಡಿಸುವ ಕ್ರಮವಾಗಿ ಕಡಲ ಗಡಿಯನ್ನು ಗುರುತಿಸಲು ಮಾತುಕತೆಗೆ ಬರುವಂತೆ ಇರಾನ್‍ಗೆ ಮತ್ತೊಮ್ಮೆ ಆಹ್ವಾನ ನೀಡುತ್ತಿದ್ದೇವೆ' ಎಂದು ಗುರುವಾರ ಕುವೈಟ್ ಮತ್ತು ಸೌದಿ ಅರೆಬಿಯಾ ಹೇಳಿಕೆ ನೀಡಿವೆ.