ಗೆಲುವು ಸಾಧಿಸಿದ ಹೊರತಾಗಿಯೂ ಲಕ್ಷ್ಯ ಸೇನ್ ಅವರ ಗೆಲುವನ್ನು ಅಳಿಸಿ ಹಾಕಿದ ಪ್ಯಾರಿಸ್ ಒಲಿಂಪಿಕ್ಸ್
ಕಾರಣವೇನು ಗೊತ್ತೆ?
ಪ್ಯಾರಿಸ್: ಶನಿವಾರ ಬೆಳಗ್ಗೆ ನಡೆದ ಪುರುಷರ ಬ್ಯಾಡ್ಮಿಂಟನ್ ನ ಎಲ್ ಗುಂಪಿನ ಪಂದ್ಯದಲ್ಲಿ ಭಾರತದ ಮುಂಚೂಣಿ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಗ್ವಾಟೆಮಾಲಾದ ಕೆವಿನ್ ಕಾರ್ಡನ್ ವಿರುದ್ಧ ನಡೆದ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದರೂ, ಗ್ವಾಟೆಮಾಲಾದ ಆಟಗಾರ ಕೆವಿನ್ ಕಾರ್ಡನ್, ಎಲ್ ಗುಂಪಿನಲ್ಲಿ ಮುಂದೆ ನಡೆಯಬೇಕಿದ್ದ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಹಾಗೂ ಬೆಲ್ಜಿಯಂನ ಜೂಲಿಯನ್ ಕರ್ರಾಗ್ಗಿ ವಿರುದ್ಧದ ಪಂದ್ಯಗಳಲ್ಲಿ ಗಾಯಗೊಂಡಿರುವ ಕಾರಣಕ್ಕೆ ಆಡುವುದಿಲ್ಲ ಎಂದು ಪ್ರಕಟಿಸಿರುವುದರಿಂದ, ಲಕ್ಷ್ಯ ಸೇನ್ ಅವರ ಗೆಲುವನ್ನು ಪ್ಯಾರಿಸ್ ಒಲಿಂಪಿಕ್ಸ್ ಅಳಿಸಿ ಹಾಕಿದೆ ಎಂದು Olympics.com ಹೇಳಿದೆ. ಬಿಡಬ್ಲ್ಯೂಎಫ್ ಸಾಮಾನ್ಯ ಸ್ಪರ್ಧೆ ನಿಯಮಾವಳಿಗಳ ಪ್ರಕಾರ, ಲಕ್ಷ್ಯ ಸೇನ್ ಹಾಗೂ ಕೆವಿನ್ ಕಾರ್ಡನ್ ನಡುವಿನ ಪಂದ್ಯದ ಫಲಿತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ವರದಿಯಾಗಿದೆ.
ಶನಿವಾರ ಬೆಳಗ್ಗೆ ನಡೆದ ಎಲ್ ಗುಂಪಿನ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ತಮ್ಮ ಎದುರಾಳಿ ಕೆವಿನ್ ಕಾರ್ಡನ್ ಅವರನ್ನು 21-8, 22-20 ಅಂತರದಲ್ಲಿ ಸುಲಭವಾಗಿ ಪರಾಭವಗೊಳಿಸಿದ್ದರು. 42 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ನೇರ ಸೆಟ್ ಗಳಲ್ಲಿ ಲಕ್ಷ್ಯ ಸೇನ್ ಗೆಲುವು ಸಾಧಿಸಿದ್ದರು.
ಎಲ್ ಗುಂಪಿನ ಮುಂದಿನ ಎರಡು ಪಂದ್ಯಗಳಲ್ಲಿನ ಫಲಿತಾಂಶವನ್ನು ಆಧರಿಸಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರ ಶ್ರೇಯಾಂಕ ನಿರ್ಧಾರವಾಗಲಿದೆ. ಈ ನಡುವೆ, ಜುಲೈ 29ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರ್ರಾಗ್ಗಿ ಅವರನ್ನು ಲಕ್ಷ್ಯ ಸೇನ್ ಎದುರಿಸಲಿದ್ದಾರೆ.