ಬಡವರಿಗೂ ಬದುಕಲು ಬಿಡಿ: ಅಗ್ರಸ್ಥಾನದಲ್ಲಿರುವ ಆರ್ಸಿಬಿಯನ್ನು ಅಣಕಿಸಿದ ಸೆಹ್ವಾಗ್

ಸೆಹ್ವಾಗ್ | PC : PTI
ಹೊಸದಿಲ್ಲಿ: ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ 2025ರ ಆವೃತ್ತಿಯ ಐಪಿಎಲ್ ನಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನಸಿನ ಆರಂಭ ಪಡೆದಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್ ಗಳಿಂದ ಅದರದೇ ನೆಲದಲ್ಲಿ ಸೋಲಿಸಿ ಶುಭಾರಂಭ ಮಾಡಿರುವ ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡ ಅದರದೇ ಕ್ರೀಡಾಂಗಣದಲ್ಲಿ 50 ರನ್ನಿಂದ ಮಣಿಸಿತ್ತು. ಸತತ ಎರಡು ಪಂದ್ಯಗಳ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಪಂದ್ಯಾವಳಿಯಲ್ಲಿ ಭರ್ಜರಿ ಆರಂಭ ಪಡೆದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಆರ್ಸಿಬಿ ತಂಡವನ್ನು ಅಣಕಿಸಿದ್ದಾರೆ. ಈ ತಂಡವನ್ನು ಗರೀಬ್(ಬಡವರು)ಎಂದು ಕರೆದಿದ್ದಾರೆ.
ಈ ತನಕ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದ ಆರ್ಸಿಬಿಯಂತಹ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಆನಂದಿಸುವ ಅವಕಾಶ ಪಡೆಯಬೇಕು ಎಂದು ಸೆಹ್ವಾಗ್ ವ್ಯಂಗ್ಯವಾಡಿದರು.
‘‘ಬಡವರು ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಮೇಲಿರಲಿ, ಅವರು ಫೋಟೊಗಳನ್ನು ಕ್ಲಿಕ್ ಮಾಡಲಿ, ಅವರು ಎಷ್ಟು ಕಾಲ ಅಗ್ರಸ್ಥಾನದಲ್ಲಿ ಇರುತ್ತಾರೆಂದು ಯಾರಿಗೆ ಗೊತ್ತು’’ ಎಂದು ಕ್ರಿಕ್ಬಝ್ನಲ್ಲಿ ನಡೆದ ಚಾಟ್ ನಲ್ಲಿ ಸೆಹ್ವಾಗ್ ತಿಳಿಸಿದರು.
‘‘ನಾನು ಹಣದ ಬಗ್ಗೆ ಮಾತನಾಡುತ್ತಿದ್ದೇನೆಂದು ನೀವು ಭಾವಿಸಿದ್ದೀರಾ? ಖಂಡಿತಾ ಇಲ್ಲ, ಅವರೆಲ್ಲರೂ ಹಣದ ವಿಷಯದಲ್ಲಿ ಶ್ರೀಮಂತರು. ಫ್ರಾಂಚೈಸಿಗಳು ಪ್ರತಿ ಋತುವಿನಲ್ಲಿ 400-500 ಕೋಟಿ ರೂ. ಗಳಿಸುತ್ತವೆ. ನಾನು ಹಣದ ಬಗ್ಗೆ ಮಾತನಾಡುತ್ತಿಲ್ಲ. ಒಂದೇ ಒಂದು ಟ್ರೋಫಿಯನ್ನು ಗೆಲ್ಲದ ತಂಡವನ್ನು ನಾನು ಗರೀಬ್ ಎಂದು ಕರೆಯುತ್ತಿದ್ದೇನೆ’’ ಎಂದು ಸೆಹ್ವಾಗ್ ಹೇಳಿದರು.
ಆರ್ಸಿಬಿ ಅಲ್ಲದೆ, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ನಂತಹ ತಂಡಗಳು ಕೂಡ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ.