ಭಾರತ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿ ; ನಾಯಕ ಟೆಂಬಾ ಬವುಮಾಗೆ ವಿಶ್ರಾಂತಿ ನೀಡಿದ ದಕ್ಷಿಣ ಆಫ್ರಿಕಾ
ಟೆಂಬಾ ಬವುಮಾ | Photo: PTI
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ತಂಡ ಮುಂಬರುವ ಭಾರತ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ನಾಯಕ ಟೆಂಬಾ ಬವುಮಾಗೆ ವಿಶ್ರಾಂತಿ ನೀಡಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನ ಲ್ಲಿ ಬವುಮಾ ಅವರು ದಕ್ಷಿಣ ಆಫ್ರಿಕಾ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ವಿಶ್ವಕಪ್ ವೇಳೆ ನಾನು ಶೇ.100ರಷ್ಟು ಫಿಟ್ ಇರಲಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಬವುಮಾ, ಡಿಸೆಂಬರ್ 26ರಿಂದ ಆರಂಭವಾಗಲಿರುವ ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ.
ಬವುಮಾ ಅನುಪಸ್ಥಿತಿಯಲ್ಲಿ ಐಡೆನ್ ಮಾರ್ಕ್ರಮ್ ಭಾರತ ವಿರುದ್ಧ ಟ್ವೆಂಟಿ-20 ಹಾಗೂ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ನಾಯಕನ ಜವಾಬ್ದಾರಿ ವಹಿಸಲಿದ್ದಾರೆ.
*ಬವುಮಾಗೆ ವಿಶ್ರಾಂತಿ ನೀಡಿದ್ದು ಏಕೆ?
ಬವುಮಾ ವಿಶ್ವಕಪ್ನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಕೇವಲ 18.12ರ ಸರಾಸರಿಯಲ್ಲಿ ಸ್ಕೋರ್ ಗಳಿಸಿ ರನ್ಗಾಗಿ ಪರದಾಟ ನಡೆಸಿದ್ದರು. 35 ಗರಿಷ್ಠ ವೈಯಕ್ತಿಕ ಸ್ಕೋರಾಗಿತ್ತು. ಹೀಗಾಗಿ ಬವುಮಾರನ್ನು ಸೀಮಿತ ಓವರ್ ಕ್ರಿಕೆಟ್ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಟೆಸ್ಟ್ ಪಂದ್ಯದ ವೇಳೆಗೆ ಚೇತರಿಸಿಕೊಳ್ಳಲು ಹಾಗೂ ಅದಕ್ಕೆ ತಯಾರಿ ನಡೆಸಲು ಅವಕಾಶ ನೀಡಲಾಗಿದೆ.
ವಿಶ್ವಕಪ್ ಅಂತ್ಯದ ವೇಳೆ ಏಕದಿನ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಕ್ವಿಂಟನ್ ಡಿಕಾಕ್ ಟಿ-20 ಸರಣಿಗೆ ಅಲಭ್ಯರಾಗಿದ್ದಾರೆ. ಆದರೆ, ಆಸ್ಟ್ರೇಲಿಯದ ಬಿಗ್ಬ್ಯಾಶ್ ಸ್ಪರ್ಧಾವಳಿಯಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ನೊಂದಿಗೆ ಆಡಲು ಸಜ್ಜಾಗಿದ್ದಾರೆ.
*ತಂಡಗಳಲ್ಲಿ ಹೊಸ ಮುಖಗಳಿಗೆ ಮಣೆ
ಟೆಸ್ಟ್ ತಂಡದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಬ್ಯಾಟರ್ಗಳಾದ ಡೇವಿಡ್ ಬೆಡಿಂಗ್ಹ್ಯಾಮ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಇದೇ ಮೊದಲ ಬಾರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ವೇಗದ ಬೌಲರ್ ನ್ಯಾಂಡ್ರೆ ಬರ್ಗೆರ್ ಕೂಡ ಎಲ್ಲ ಮೂರು ಮಾದರಿಯ ಕ್ರಿಕೆಟ್ನ ತಂಡದಲ್ಲಿ ಸೇರ್ಪಡೆಯಾಗಿದ್ದಾರೆ.
ವಿಕೆಟ್ಕೀಪರ್-ಬ್ಯಾಟರ್ ಕೈಲ್ ವೆರ್ರೆಯನ್ನೆ ಹಾಗೂ ಆಲ್ರೌಂಡರ್ ವಿಯಾನ್ ಮುಲ್ಡರ್ ಅವರು ಟೆಸ್ಟ್ ಹಾಗೂ ಏಕದಿನ ತಂಡಗಳಿಗೆ ವಾಪಸಾಗಿದ್ದಾರೆ.
*ಸೀಮಿತ ಓವರ್ ಕ್ರಿಕೆಟ್ ಸರಣಿಯಿಂದ ರಬಾಡಗೆ ವಿಶ್ರಾಂತಿ
ಇದೇ ವೇಳೆ ಪ್ರಮುಖ ವೇಗದ ಬೌಲರ್ ಕಾಗಿಸೊ ರಬಾಡಗೆ ದೇಶೀಯ ಚತುರ್ದಿನ ಕ್ರಿಕೆಟ್ನಲ್ಲಿ ಭಾಗವಹಿಸಿ ಟೆಸ್ಟ್ ಪಂದ್ಯಗಳಿಗೆ ತಯಾರಿ ನಡೆಸಲು ಸೀಮಿತ ಓವರ್ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ.
ಇದೇ ಕಾರಣಕ್ಕೆ ಜೆರಾಲ್ಡ್ ಕೊಯೆಟ್ಝಿ, ಲುಂಗಿ ಗಿಡಿ ಹಾಗೂ ಮಾರ್ಕೊ ಜಾನ್ಸನ್ರನ್ನೂ ಏಕದಿನ ಕ್ರಿಕೆಟ್ನಿಂದ ಹೊರಗಿಡಲಾಗಿದೆ.
*ಸರಣಿ ವೇಳಾಪಟ್ಟಿ
ಡಿಸೆಂಬರ್ 10ರಿಂದ 14ರ ತನಕ ನಡೆಯಲಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಆಡುವ ಮೂಲಕ ಭಾರತವು ತನ್ನ ಪ್ರವಾಸವನ್ನು ಆರಂಭಿಸಲಿದೆ. ಆ ನಂತರ ಡಿಸೆಂಬರ್ 17ರಿಂದ 21ರ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26ರಂದು ಪ್ರಿಟೋರಿಯದಲ್ಲಿ ಆರಂಭವಾಗಲಿದೆ. ದ್ವಿತೀಯ ಟೆಸ್ಟ್ ಪಂದ್ಯವು ಕೇಪ್ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ಜನವರಿ 3ರಿಂದ ಆರಂಭವಾಗಲಿದೆ.
*ಟ್ವೆಂಟಿ-20 ತಂಡ: ಐಡೆನ್ ಮಾರ್ಕ್ರಮ್(ನಾಯಕ), ಒಟ್ನಿಯೆಲ್ ಬಾರ್ಟ್ಮನ್, ಮ್ಯಾಥ್ಯೂ ಬ್ರೀಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಡೊನೊವನ್ ಫೆರೇರ, ರೀಝಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸನ್, ಹೆನ್ರಿಚ್ ಕ್ಲಾಸೆನ್, ಕೇಶವ ಮಹಾರಾಜ್, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಝ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಲಿಝಾರ್ಡ್ ವಿಲಿಯಮ್ಸ್.
*ಏಕದಿನ ತಂಡ: ಐಡೆನ್ ಮಾರ್ಕ್ರಮ್ (ನಾಯಕ), ಒಟ್ನಿಯೆಲ್ ಬಾರ್ಟ್ಮನ್, ನಾಂಡ್ರೆ ಬರ್ಗರ್, ಟೋನಿ ಡಿ ರೆರ್ಝಿ, ರೀಝಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಝ್ ಶಂಸಿ, ರಾಸ್ಸಿ ವಾನ್ಡರ್ ಡುಸ್ಸೆನ್, ಕೈಲ್ ವೆರ್ರೆನ್ನೆ ಹಾಗೂ ಲೀಝಾಡ್ ವಿಲಿಯಮ್ಸ್.
*ಟೆಸ್ಟ್ ತಂಡ: ಟೆಂಬಾ ಬವುಮಾ(ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಝಿ, ಟೋನಿ ಡಿ ರೊರ್ಝಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸನ್, ಕೇಶವ ಮಹಾರಾಜ್, ಐಡೆನ್ ಮಾರ್ಕ್ರಮ್, ವಿಯಾನ್ ಮುಲ್ಡರ್, ಲುಂಗಿ ಗಿಡಿ, ಕೀಗನ್ ಪೀಟರ್ಸನ್, ಕಾಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಕೈಲ್ ವೆರ್ರೆನ್ನೆ,