ಐಪಿಎಲ್ ಟೂರ್ನಿಯಿಂದ ಹೊರಗುಳಿದ ಲಕ್ನೊ ವೇಗಿ ಶಿವಂ ಮಾವಿ
ಶಿವಂ ಮಾವಿ | Photo: X \ @mufaddal_vohra
ಹೊಸದಿಲ್ಲಿ : ಲಕ್ನೊ ಸೂಪರ್ ಜಯಂಟ್ಸ್ ವೇಗದ ಬೌಲರ್ ಶಿವಂ ಮಾವಿ ಗಾಯದ ಸಮಸ್ಯೆಯ ಕಾರಣಕ್ಕೆ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಮೆಂಟ್ನಿಂದ ಹೊರಗುಳಿದಿದ್ದಾರೆ.
2023ರ ಆಗಸ್ಟ್ನಿಂದ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟನ್ನು ಆಡದ 25ರ ಹರೆಯದ ಮಾವಿ ತನ್ನ ತಂಡದೊಂದಿಗೆ ತರಬೇತಿಯಲ್ಲಿ ಭಾಗವಹಿಸಿದ್ದರು. ಪ್ರಸಕ್ತ ಆವೃತ್ತಿಯ ಟೂರ್ನಮೆಂಟ್ನಲ್ಲಿ ಭಾಗವಹಿಸಲು ತನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಮಾವಿ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಗಾಯದ ಸಮಸ್ಯೆಗೆ ಈಡಾಗಿದ್ದ ಮಾವಿ ಉತ್ತರಪ್ರದೇಶದ ಪರ ದೇಶೀಯ ಋತುವಿನಿಂದ ವಂಚಿತರಾಗಿದ್ದರು.
ಪ್ರತಿಭಾವಂತ ಬಲಗೈ ವೇಗದ ಬೌಲರ್ ಮಾವಿ ಡಿಸೆಂಬರ್ನಲ್ಲಿ ಹರಾಜು ಪ್ರಕ್ರಿಯೆ ನಡೆದ ನಂತರ ನಮ್ಮ ತಂಡವನ್ನು ಸೇರಿಕೊಂಡಿದ್ದರು. ಐಪಿಎಲ್ ಪೂರ್ವ ಶಿಬಿರದಲ್ಲಿ ಭಾಗವಹಿಸಿದ್ದರು. ಈ ಋತುವಿನಲ್ಲಿ ತಂಡದ ಪ್ರಮುಖ ಸದಸ್ಯರಾಗಿದ್ದರು. ಶಿವಂ ಈ ಋತುವನ್ನು ಬೇಗನೆ ಕೊನೆಗೊಳಿಸಿರುವುದಕ್ಕೆ ನಮಗೆ ತುಂಬಾ ಬೇಸರವಾಗಿದೆ ಎಂದು ಲಕ್ನೊ ಸೂಪರ್ ಜಯಂಟ್ಸ್ ತಿಳಿಸಿದೆ.
ಶಿವಂ ಮಾವಿ ಆರು ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರೂ ಕೂಡ 2023ರಲ್ಲಿ ಗುಜರಾತ್ ಟೈಟಾನ್ಸ್ ಪರ ಒಂದೂ ಪಂದ್ಯವನ್ನು ಆಡಿರಲಿಲ್ಲ. ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡ ಆವೇಶ್ ಖಾನ್ ಬದಲಿಗೆ ಹಿಂದಿನ ಹರಾಜಿನಲ್ಲಿ ಲಕ್ನೊ ತಂಡವು ಶಿವಂ ಮಾವಿ ಅವರನ್ನು 6.4 ಕೋಟಿ ರೂ.ಗೆ ಖರೀದಿಸಿತ್ತು.
ಶಿವಂ ಮಾವಿಗೆ ಫ್ರಾಂಚೈಸಿಯು ಬೆಂಬಲ ನೀಡುವುದನ್ನು ಮುಂದುವರಿಸಲಿದೆ. ಚೇತರಿಕೆಯ ಪ್ರಕ್ರಿಯೆಯಲ್ಲಿ ನೆರವು ನೀಡಲು ಬದ್ಧವಾಗಿದೆ. ಅವರು ಬೇಗನೆ ಚೇತರಿಸಿಕೊಂಡು ವಾಪಸಾಗಲಿ ಎಂದು ಹಾರೈಸುವೆವು. ಅವರು ಫಿಟ್ ಹಾಗೂ ಬಲಿಷ್ಠರಾಗಿ ವಾಪಸಾಗುವ ವಿಶ್ವಾಸ ನಮಗಿದೆ ಎಂದು ಲಕ್ನೊ ತಂಡ ತಿಳಿಸಿದೆ.
ನಾನು ಪಂದ್ಯಗಳನ್ನು ಆಡುತ್ತೇನೆ. ನನ್ನ ತಂಡಕ್ಕೆ ಒಳ್ಳೆಯದು ಮಾಡುತ್ತೇನೆಂದು ಯೋಚಿಸಿದ್ದೆ. ದುರದೃಷ್ಟವಶಾತ್ ನನಗೆ ಗಾಯವಾಗಿದೆ. ಆಟಗಾರನು ಮಾನಸಿಕವಾಗಿ ಗಟ್ಟಿಯಾಗಿರಬೇಕು. ನಮ್ಮದು ಬಲಿಷ್ಠ ತಂಡ ಎಂದು ಲಕ್ನೊ ತಂಡ ಅಧಿಕೃತ ಎಕ್ಸ್ನಲ್ಲಿ ಹಾಕಿರುವ ವೀಡಿಯೊದಲ್ಲಿ ಶಿವಂ ಮಾವಿ ಹೇಳಿದ್ದಾರೆ.