ಲಕ್ನೊ ನಾಯಕತ್ವ ಕಳೆದುಕೊಳ್ಳಲಿರುವ ಕೆ.ಎಲ್.ರಾಹುಲ್?
Photo - PTI
ಹೊಸದಿಲ್ಲಿ : ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ಭಾರೀ ಅಂತರದ ಸೋಲನುಭವಿಸಿರುವ ಲಕ್ನೊ ಸೂಪರ್ ಜೈಂಟ್ಸ್ ತಂಡ ಐಪಿಎಲ್ ಪ್ಲೇ ಆಫ್ ಸ್ಪರ್ಧೆಯಿಂದ ಬಹುತೇಕ ಹೊರಗುಳಿದಿದೆ. ಕೆ.ಎಲ್.ರಾಹುಲ್ ಇನ್ನುಳಿದ ಎರಡು ಪಂದ್ಯಗಳಲ್ಲಿ ತಂಡದ ನಾಯಕ ಸ್ಥಾನದಲ್ಲಿರುವ ಕುರಿತು ಅನಿಶ್ಚಿತತೆ ತಲೆದೋರಿದೆ.
2022ರ ಐಪಿಎಲ್ ಹರಾಜಿಗೆ ಮೊದಲು ದಾಖಲೆಯ 17 ಕೋ.ರೂ.ಗೆ ಸಹಿ ಹಾಕಿದ್ದ ಲಕ್ನೊ ನಾಯಕ ರಾಹುಲ್ 2025ರ ಮೆಗಾ ಹರಾಜಿಗಿಂತ ಮೊದಲು ತಂಡದಲ್ಲಿ ಉಳಿಯಲಾರರು ಎಂದು ನಂಬಲಾಗಿದೆ. ಮುಂಬರುವ ಪಂದ್ಯಗಳಲ್ಲಿ ತನ್ನ ಬ್ಯಾಟಿಂಗ್ ನತ್ತ ಗಮನ ಹರಿಸಲು ರಾಹುಲ್ ಸ್ವಯಂಪ್ರೇರಿತರಾಗಿ ನಾಯಕನ ಸ್ಥಾನವನ್ನು ತ್ಯಜಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯಕ್ಕಿಂತ ಮೊದಲು ಐದು ದಿನ ಅಂತರವಿದೆ. ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನುಳಿದ ಎರಡು ಪಂದ್ಯಗಳಲ್ಲಿ ರಾಹುಲ್ ತನ್ನ ಬ್ಯಾಟಿಂಗ್ ನತ್ತ ಮಾತ್ರ ಚಿತ್ತಹರಿಸುವ ಯೋಜನೆ ಹಾಕಿಕೊಂಡರೆ ಮ್ಯಾನೇಜ್ಮೆಂಟ್ ಇದಕ್ಕೆ ತಲೆಕೆಡಿಸಿಕೊಳ್ಳದು ಎಂದು ಐಪಿಎಲ್ ಮೂಲಗಳು ಪಿಟಿಐಗೆ ತಿಳಿಸಿವೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ಓಪನರ್ಗಳಾದ ಟ್ರಾವಿಸ್ ಹೆಡ್(ಔಟಾಗದೆ 89, 30 ಎಸೆತ)ಹಾಗೂ ಅಭಿಷೇಕ್ ಶರ್ಮಾ(ಔಟಾಗದೆ 75 ರನ್, 28 ಎಸೆತ)10 ಓವರ್ನೊಳಗೆ 167 ರನ್ ಗುರಿಯನ್ನು ತಲುಪಿದ ನಂತರ ಲಕ್ನೊ ಸೂಪರ್ ಜೈಂಟ್ಸ್ ಮಾಲಕ ಸಂಜೀವ್ ಗೋಯೆಂಕಾ ಅವರು ಕೆ.ಎಲ್.ರಾಹುಲ್ ಜೊತೆಗೆ ವಾಗ್ವಾದ ನಡೆಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಲಕ್ನೊ ಬ್ಯಾಟರ್ಗಳು ಹೈದರಾಬಾದ್ ಪಿಚ್ನಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದರು. ಪವರ್ ಪ್ಲೇನಲ್ಲಿ ರಾಹುಲ್ (29 ರನ್, 33 ಎಸೆತ)ನೀರಸ ಬ್ಯಾಟಿಂಗ್ ಮಾಡಿರುವುದು ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಲಕ್ನೊದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣವಾಗಿತ್ತು. ಇದು ಗೋಯೆಂಕಾ ತಾಳ್ಮೆ ಕಳೆದುಕೊಳ್ಳಲು ಕಾರಣವಾಗಿರಬಹುದು.
ಭಾರತದ ಸ್ಟಾರ್ ಆಟಗಾರ ರಾಹುಲ್ 12 ಪಂದ್ಯಗಳಲ್ಲಿ 460 ರನ್ ಗಳಿಸಿದ್ದು, ಈ ಋತುವಿನಲ್ಲೂ 500ಕ್ಕೂ ಅಧಿಕ ರನ್ ಗಳಿಸಬಹುದು. ಆದರೆ ಅವರ ಸ್ಟ್ರೈಕ್ರೇಟ್(136.09)ಒಂದು ಸಮಸ್ಯೆಯಾಗಿದೆ.
ಲಕ್ನೊ ತಂಡ ಇನ್ನುಳಿದ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ 16 ಅಂಕ ಗಳಿಸಿ ಪ್ಲೇ ಆಫ್ನಲ್ಲಿ ಸ್ಪರ್ಧೆಯಲ್ಲಿರಬಹುದು. ಲಕ್ನೊ ತಂಡ ಮೇ 14ರಂದು ಹೊಸದಿಲ್ಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮೇ 17ರಂದು ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುಖಾಮುಖಿಯಾಗಲಿದೆ.
ಆದರೆ ನೆಟ್ ರನ್ರೇಟ್(-0.769)ನಲ್ಲಿ ಭಾರೀ ಪ್ರಮಾಣದಲ್ಲಿ ಸುಧಾರಿಸುವುದು ಲಕ್ನೊ ಪಾಲಿಗೆ ತುಂಬಾ ಕಷ್ಟಕರವಾಗಿದೆ.
ಒಂದು ವೇಳೆ ರಾಹುಲ್ ನಾಯಕ ಹುದ್ದೆ ತ್ಯಜಿಸಿದರೆ ಉಪ ನಾಯಕ ನಿಕೊಲಸ್ ಪೂರನ್ ಇನ್ನೆರಡು ಪಂದ್ಯಗಳಲ್ಲಿ ತಂಡದ ನೇತೃತ್ವವಹಿಸುವ ಸಾಧ್ಯತೆಯಿದೆ. ಪೂರನ್ ಈ ಋತುವಿನಲ್ಲಿ ತಂಡದ ಅತ್ಯಂತ ಉತ್ತಮ ಬ್ಯಾಟರ್ ಆಗಿದ್ದಾರೆ.