ಲಕ್ನೋ ತಂಡಕ್ಕೆ ಸೋಲಿನ ಗಾಯದ ಬಳಿಕ ದಂಡದ ಬರೆ!

ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್
PC: x.com/RevSportzGlobal
ಹೊಸದಿಲ್ಲಿ: ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಪಾಲಿಗೆ ಪ್ರಸಕ್ತ ವರ್ಷದ ಐಪಿಎಲ್ ಸೀಸನ್ ದುಃಸ್ವಪ್ನವಾಗಿ ಕಾಡುತ್ತಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್ಎಸ್ ಜಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 54 ರನ್ ಗಳ ಭಾರಿ ಅಂತರದ ಸೋಲು ಅನುಭವಿಸಿದೆ. ಗಾಯದ ಮೇಳೆ ಬರೆ ಎಂಬಂತೆ, ನಿಧಾನ ಬೌಲಿಂಗ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅವರಿಗೆ 24 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಈಗಾಗಲೇ ಬ್ಯಾಟಿಂಗ್ ವೈಫಲ್ಯದಿಂದ ಪಂತ್ ಕಂಗೆಟ್ಟಿದ್ದು, ಮುಂಬೈ ಇಂಡಿಯನ್ಸ್ ನೀಡಿದ್ದ 215 ರನ್ ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಕೇವಲ 4 ರನ್ ಗಳಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಇದರ ಬೆನ್ನಲ್ಲೇ ಐಪಿಎಲ್ ನ ನೀತಿಸಂಹಿಸತೆಯ ವಿಧಿ 2.22ರ ಅನ್ವಯ ನಿಧಾನ ಗತಿಯ ಬೌಲಿಂಗ್ ಗಾಗಿ ಪ್ರಸಕ್ತ ಸೀಸನ್ ನಲ್ಲಿ ಎರಡನೇ ಬಾರಿ ದಂಡನೆಗೆ ಒಳಗಾಗಿದೆ. ಬೌಲಿಂಗ್ ಗೆ ಆಹ್ವಾನಿಸಲ್ಪಟ್ಟ ಸಂದರ್ಭದಲ್ಲಿ ಪಂತ್, "ನಮ್ಮ ಪಾಲಿಗೆ ಮೊದಲು ಬೌಲಿಂಗ್ ಮಾಡುವುದು ಸೂಕ್ತ ನಿರ್ಧಾರವಾಗಿತ್ತು. ನಮ್ಮ ಬ್ಯಾಟಿಂಗ್ ಬಲಕ್ಕೆ ನಾವು ಬೆಂಬಲವಾಗಿ ನಿಂತಿದ್ದೆವು. ಆದರೆ ನಮ್ಮ ಪಾಲಿಗೆ ಇಂದು ಒಳ್ಳೆಯ ದಿನವಾಗಿರಲಿಲ್ಲ. ನಮಗೆ ವಿಶ್ರಾಂತಿ ಇರುವುದರಿಂದ ಮುಂದಿನ ಕಾರ್ಯತಂತ್ರ ರೂಪಿಸಲಿದ್ದೇವೆ" ಎಂದು ಸ್ಪಷ್ಟಪಡಿಸಿದ್ದರು.
ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 54 ರನ್ ಸಿಡಿಸಿದ್ದು ಮತ್ತು 4 ವಿಕೆಟ್ ಪಡೆಯುವ ಮೂಲಕ ಜಸ್ ಪ್ರೀತ್ ಬೂಮ್ರಾ ಬೌಲಿಂಗ್ ನಲ್ಲಿ ಮಿಂಚಿದ್ದು, ಎಲ್ಎಸ್ ಜಿ ಸೋಲಿಗೆ ಪ್ರಮುಖ ಕಾರಣವಾಯಿತು. ಮುಂಬೈ ಇಂಡಿಯನ್ಸ್ ಸತತ ಐದನೇ ಜಯ ದಾಖಲಿಸಿದರೆ, ಎಲ್ಎಸ್ಜಿ ಸತತ ಎರಡನೇ ಸೋಲು ಅನುಭವಿಸಿ ಆರನೇ ಸ್ಥಾನಕ್ಕೆ ಕುಸಿದಿದೆ.