ಮಲೇಶ್ಯ ಮಾಸ್ಟರ್ಸ್ ಫೈನಲ್: ಚೀನಾ ಆಟಗಾರ್ತಿ ವಾಂಗ್ ವಿರುದ್ಧ ಸೋತ ಸಿಂಧು
ಪಿ.ವಿ.ಸಿಂಧು | NDTV
ಕೌಲಾಲಂಪುರ: ಮಲೇಶ್ಯ ಮಾಸ್ಟರ್ಸ್ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ರವಿವಾರ ಪ್ರಬಲ ಪ್ರತಿರೋಧ ಒಡ್ಡಿದ ಚೀನಾದ ವಾಂಗ್ ಝಿಯಿ ಭಾರತದ ಪಿ.ವಿ.ಸಿಂಧು ವಿರುದ್ಧ ಜಯಭೇರಿ ಬಾರಿಸಿದರು.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಾಂಗ್ ಅವರು ಸಿಂಧುರನ್ನು 21-16, 5-21, 16-21 ಗೇಮ್ಗಳ ಅಂತರದಿಂದ ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡರು.
ವಾಂಗ್ ಆರಂಭದಲ್ಲಿ 2-0 ಮುನ್ನಡೆ ಪಡೆದಿದ್ದರು. ಆದರೆ ಸಿಂಧು ತಕ್ಷಣವೇ ತನ್ನ ಲಯ ಕಂಡುಕೊಂಡು 11-9ರಿಂದ ಮುನ್ನಡೆ ಸಾಧಿಸಿದರು. ಅಂತಿಮವಾಗಿ ಮೊದಲ ಗೇಮ್ ಅನ್ನು 21-16 ಅಂತರದಿಂದ ಗೆದ್ದುಕೊಂಡರು.
ಆದರೆ ಎರಡನೇ ಗೇಮ್ನಲ್ಲಿ ಸಿಂಧು ಅವರು ವಾಂಗ್ ವಿರುದ್ಧ ಪರದಾಟ ನಡೆಸಿದರು. ಎರಡನೇ ಗೇಮ್ ಅನ್ನು 21-5 ಅಂತರದಿಂದ ಗೆದ್ದುಕೊಂಡ ವಾಂಗ್ ಸಂಪೂರ್ಣ ಪ್ರಾಬಲ್ಯ ಮೆರೆದರು. ವಾಂಗ್ ಅವರ ಅಪರೂಪದ ತಪ್ಪಿನಿಂದಾಗಿ ಸಿಂಧು ಕೆಲವೇ ಪಾಯಿಂಟ್ಸ್ ಪಡೆದರು. ದಣಿದಂತೆ ಕಂಡುಬಂದ ಸಿಂಧು ವಾಂಗ್ ಅವರ ವೇಗದ ಆಟದ ಮುಂದೆ ಪರದಾಟ ನಡೆಸಿದರು.
3ನೇ ಗೇಮ್ನ ಆರಂಭದಲ್ಲಿ ಸಿಂಧು 7-2ರಿಂದ ಮುನ್ನಡೆ ಪಡೆದಿದ್ದರು. ಚೀನಾದ ಆಟಗಾರ್ತಿ ಮರು ಹೋರಾಟ ನೀಡಿದ್ದು ಈ ವೇಳೆ ಸಿಂಧು ತನ್ನ ಲಯ ಕಳೆದುಕೊಂಡರು. 3ನೇ ಗೇಮ್ನ್ನು 16-21 ಅಂತರದಿಂದ ಸೋತರು.
ಸಿಂಧು ಪ್ರಸಕ್ತ ಟೂರ್ನಿಯ ಫೈನಲ್ ಹಾದಿಯಲ್ಲಿ ಸ್ಮರಣೀಯ ಗೆಲುವು ದಾಖಲಿಸಿದರು. ಸೆಮಿ ಫೈನಲ್ನಲ್ಲಿ ಥಾಯ್ಲೆಂಡ್ನ ಬುಸನನ್ ಒಂಗ್ಬಮ್ರುಂಗ್ಫನ್ ವಿರುದ್ಧ ಜಯ ಸಾಧಿಸಿ ತನ್ನ ಇತ್ತೀಚೆಗಿನ ಕಳಪೆ ಫಾರ್ಮ್ ಹಾಗೂ ಫಿಟ್ನೆಸ್ನಿಂದ ಹೊರ ಬಂದಿದ್ದರು.