ಮಲೇಶ್ಯ ಓಪನ್: ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಸೆಮಿ ಫೈನಲ್ ಗೆ
ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ | PTI
ಹೊಸದಿಲ್ಲಿ : ಭಾರತದ ಸ್ಟಾರ್ ಶಟ್ಲರ್ಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕೌಲಾಲಂಪುರದಲ್ಲಿ ನಡೆಯುತ್ತಿರುವ ಮಲೇಶ್ಯ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ಗೆ ತಲುಪಿದ್ದಾರೆ.
ಭಾರತದ 7ನೇ ಶ್ರೇಯಾಂಕದ ಜೋಡಿ ಸಾತ್ವಿಕ್ ಹಾಗೂ ಚಿರಾಗ್ ಶುಕ್ರವಾರ 49 ನಿಮಿಷಗಳಲ್ಲಿ ಕೊನೆಗೊಂಡಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಶ್ಯದ ಜೋಡಿ ಯೀವ್ ಸಿನ್ ಒಂಗ್ ಹಾಗೂ ಯೀ ಟೆವೊರನ್ನು 26-24, 21-15 ಗೇಮ್ಗಳ ಅಂತರದಿಂದ ಮಣಿಸಿದರು.
ಮೊದಲ ಗೇಮ್ ಸೋತ ನಂತರ ಮಲೇಶ್ಯದ ಜೋಡಿ 2ನೇ ಗೇಮ್ ನಲ್ಲಿ ತೀವ್ರ ಪ್ರತಿರೋಧ ಒಡ್ಡಿತು. ಮಧ್ಯಂತರದ ತನಕ ಹೆಚ್ಚಿನ ಅವಧಿಯಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಭಾರತದ ಜೋಡಿ 11-11ರಿಂದ ಸ್ಕೋರನ್ನು ಸಮಬಲಗೊಳಿಸಿದ್ದು, ವಿರಾಮದ ನಂತರ ಮುನ್ನಡೆ ಸಾಧಿಸಿತು.
ಗುರುವಾರ 43 ನಿಮಿಷಗಳ ಕಾಲ ನಡೆದ 16 ರ ಸುತ್ತಿನ ಪಂದ್ಯದಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಮಲೇಶ್ಯ ಆಟಗಾರರಾದ ಎನ್.ಅಝ್ರಿನ್ ಹಾಗೂ ಟಾನ್ ಡಬ್ಲುಕೆ ಅವರನ್ನು 21-15, 21-15 ಗೇಮ್ಗಳ ಅಂತರದಿಂದ ಸೋಲಿಸಿದರು.
ಈ ಗೆಲುವು ನಿಜವಾಗಿಯೂ ಸಂತೋಷ ತಂದುಕೊಟ್ಟಿದೆ. ವರ್ಷದ ಮೊದಲ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದೇವೆ. ಪಂದ್ಯಾವಳಿಯಲ್ಲಿ ಸಾಧ್ಯವಾದಷ್ಟು ಮುಂದಕ್ಕೆ ಸಾಗುವತ್ತ ಚಿತ್ತಹರಿಸಲಿದ್ದೇವೆ. ನಾವು ಹೊಸ ಕೋಚ್ ರೊಂದಿಗೆ ಆಡಿದ್ದೇವೆ. ನಮಗೆ ಎಲ್ಲವೂ ಹೊಸತು. ನಾವು ಹೊಸ ಕೋಚ್ ರೊಂದಿಗೆ ಈ ಹಿಂದೆಯೂ ಕೆಲಸ ಮಾಡಿದ್ದೇವೆ. ಭಾರತೀಯ ತಂಡವನ್ನು ಪ್ರವೇಶಿಸಿದ ಸಂದರ್ಭ ಸಾತ್ವಿಕ್ ಹಾಗೂ ನನಗೆ ಅವರು ಕೋಚ್ ಆಗಿದ್ದರು ಎಂದು ಪಂದ್ಯದ ನಂತರ ಚಿರಾಗ್ ಶೆಟ್ಟಿ ಹೇಳಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನಲ್ಲಿ ಪ್ರಣಯ್ ಅವರು ಚೀನಾದ ಲಿ ಶಿ ಫೆಂಗ್ ವಿರುದ್ಧ ಸೋತಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಾಳವಿಕಾ ಬನ್ಸೋಡ್ 16ರ ಸುತ್ತಿನ ಪಂದ್ಯದಲ್ಲಿ ಚೀನಾದ 3ನೇ ಶ್ರೇಯಾಂಕದ ಜೋಡಿ ಜಿಯಾ ಯಿ ಫಾನ್ ಹಾಗೂ ಝಾಂಗ್ ಶು ಕ್ಸಿಯಾನ್ ವಿರುದ್ಧ 21-15, 19-21, 19-21 ಅಂತರದಿಂದ ಸೋತಿದ್ದಾರೆ.
ಇತ್ತೀಚೆಗೆ ಸಯ್ಯದ್ ಮೋದಿ ಸೂಪರ್ 300 ಇಂಟರ್ನ್ಯಾಶನಲ್ ಟೂರ್ನಮೆಂಟ್ನಲ್ಲಿ ಫೈನಲ್ ಗೆ ತಲುಪಿದ್ದ ಧ್ರುವ ಕಪಿಲಾ ಹಾಗೂ ತನಿಶಾ ಕ್ರಾಸ್ಟೋ ಮಿಶ್ರ ಡಬಲ್ಸ್ ವಿಭಾಗದಲ್ಲಿ 44 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 7ನೇ ಶ್ರೇಯಾಂಕದ ಚೆಂಗ್ ಕ್ಸಿಂಗ್ ಹಾಗೂ ಝಾಂಗ್ ಚಿ ಎದುರು 13-21, 20-22 ಅಂತರದಿಂದ ಸೋತಿದ್ದಾರೆ.
ಭಾರತದ ಇನ್ನೋರ್ವ ಮಿಕ್ಸೆಡ್ ಡಬಲ್ಸ್ ಜೋಡಿ ಸತೀಶ್ ಕರುಣಾಕರನ್ ಹಾಗೂ ಆದ್ಯಾ ವರಿಯತ್ ಮಲೇಶ್ಯದ 4ನೇ ಶ್ರೇಯಾಂಕದ ಜೋಡಿ ಸೂನ್ ಗೊಹ್ ಹಾಗೂ ಶೆವೊನ್ ಜೆಮಿ ಲೈ ಎದುರು 10-21, 17-21 ಅಂತರದಿಂದ ಸೋತಿದ್ದಾರೆ.