ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯ: ಭಾರತ ಎ ತಂಡದಲ್ಲೂ ರಾಹುಲ್ ವೈಫಲ್ಯ
ಕೆ.ಎಲ್. ರಾಹುಲ್ (PTI)
ಹೊಸದಿಲ್ಲಿ: ಸ್ಟಾರ್ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್ ಸೇರಿದಂತೆ ಮೊದಲ ಮೂರು ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಭಾರತ ಎ ತಂಡ ಆಸ್ಟ್ರೇಲಿಯಾ ಎ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭದಲ್ಲೇ ಆಘಾತ ಅನುಭವಿಸಿದೆ.
ಅನಧಿಕೃತ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಬ್ಯಾಟ್ಸ್ ಮನ್ ರಾಹುಲ್ ಕೇವಲ 4 ರನ್ ಗೆ ವಿಕೆಟ್ ಕೈಚೆಲ್ಲಿದರು. ಮಹತ್ವದ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಗೆ ಮುನ್ನ 32 ವರ್ಷ ವಯಸ್ಸಿನ ಕನ್ನಡಿಗ ಆಟಗಾರನಿಗೆ ತಂಡದಲ್ಲಿ ಆರಂಭಿಕನಾಗಿ ಸ್ಥಾನ ಪಡೆಯಲು ಇದು ಅಗ್ನಿಪರೀಕ್ಷೆ ಎನಿಸಿತ್ತು.
ಅಭಿಮನ್ಯು ಈಶ್ವರನ್ ಜತೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್ ಅವರನ್ನು ನಾಲ್ಕನೇ ಎಸೆತದಲ್ಲೇ ಸ್ಕಾಟ್ ಬೊನಾಲ್ಡ್ ಬಲಿ ಪಡೆದರು. ಈ ಹಂತದಲ್ಲಿ ಭಾರತ 1.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕೇವಲ 9 ರನ್ ಗಳಿಸಿತ್ತು. ಭಾರತದ ಅಗ್ರ ಕ್ರಮಾಂಕದ ಆಟಗಾರರು ರಾಹುಲ್ ಗೆ ಮುನ್ನವೇ ಮೈಕೆಲ್ ನೆಸೆರ್ ಗೆ ಮೊದಲ ಓವರ್ ನಲ್ಲೇ ಎರಡು ವಿಕೆಟ್ ಗಳನ್ನು ಒಪ್ಪಿಸಿದರು. ನಿರಂತರ ಎರಡು ಎಸೆತಗಳಲ್ಲಿ ನೆಸೆರ್ ಅವರು ಈಶ್ವರನ್ ಹಾಗೂ ಸಾಯಿ ಸುದರ್ಶನ್ ಅವರ ವಿಕೆಟ್ ಕಿತ್ತರು. ಭಾರತ ಯಾವುದೇ ರನ್ ಆಗುವ ಮುನ್ನವೆ 0.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡಿತು.
ತಮ್ಮ ಎರಡನೇ ಓವರ್ ನಲ್ಲಿ ನೆಸೆರ್ ಅವರು ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಕೇವಲ 4 ರನ್ ಗೆ ಪೆವಿಲಿಯನ್ ಗೆ ಕಳುಹಿಸುವ ಮೂಲಕ ಮೂರು ಓವರ್ ಗಳ ಮುಕ್ತಾಯಕ್ಕೆ ಭಾಗ 11 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ನವೆಂಬರ್ 22ರಿಂದಪರ್ತ್ ನಲ್ಲಿ ಆರಂಭವಾಗುವ ಬಾರ್ಡರ್-ಗಾವಸ್ಕರ್ ಸರಣಿಯ ಉದ್ದೇಶದಿಂದ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ವೈಯಕ್ತಿಕ ಕಾರಣಗಳಿಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್ ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದು, ರಾಹುಲ್ ಈ ಸ್ಥಾನಕ್ಕಾಗಿ ಈಶ್ವರನ್ ಜತೆ ಪೈಪೋಟಿಯಲ್ಲಿದ್ದಾರೆ. ದೇಶಿ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಈಶ್ವರನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.