ಮ್ಯಾಕ್ಸ್ ವೆಲ್ 201: ನಾನು ಈವರೆಗೆ ನೋಡಿದ ಅತ್ಯುತ್ತಮ ಬ್ಯಾಟಿಂಗ್ ಎಂದು ಶ್ಲಾಘಿಸಿದ ಸಚಿನ್
Photo: PTI
ಮುಂಬೈ: ಅಫ್ಘಾನಿಸ್ತಾನ ತಂಡದೆದುರು ಆಸ್ಟ್ರೇಲಿಯಾದ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ ಸಿಡಿಸಿದ ಅಮೋಘ ಮತ್ತು ಅಜೇಯ 201 ರನ್ ಅನ್ನು ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವಾರು ಕ್ರಿಕೆಟ್ ದಿಗ್ಗಜರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಮ್ಯಾಕ್ಸ್ ವೆಲ್ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ವಿಶ್ವಕಪ್ ಕ್ರಿಕೆಟ್ 2023ರಲ್ಲಿ ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನ ತಂಡದೆದುರು ರೋಚಕ ಗೆಲುವು ಸಾಧಿಸಿತು.
ಇದರ ಬೆನ್ನಿಗೇ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಬ್ಯಾಟಿಂಗ್ ವೈಖರಿಯನ್ನು ತೆಂಡೂಲ್ಕರ್, ಸೆಹ್ವಾಗ್, ವಾಸೀಂ ಅಕ್ರಮ್ ಸೇರಿದಂತೆ ಹಲವಾರು ಕ್ರಿಕೆಟ್ ದಿಗ್ಗಜರು ಮನದುಂಬಿ ಶ್ಲಾಘಿಸಿದ್ದಾರೆ.
ಈ ಕುರಿತು x ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಚಿನ್ ತೆಂಡೂಲ್ಕರ್, “ನಾನು ನನ್ನ ಜೀವನದಲ್ಲಿ ಇದುವರೆಗೆ ನೋಡಿರುವ ಅತ್ಯುತ್ತಮ ಏಕದಿನ ಪಂದ್ಯದ ಬ್ಯಾಟಿಂಗ್ ಇದಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“@IZadran18 ಅವರು ಪ್ರದರ್ಶಿಸಿದ ಅದ್ಭುತ ಬ್ಯಾಟಿಂಗ್ ಅಫ್ಘಾನಿಸ್ತಾನ ತಂಡವನ್ನು ಉತ್ತಮ ಸ್ಥಿತಿಯಲ್ಲಿರಿಸಿತ್ತು. ಅವರು ಎರಡನೆ ಅವಧಿಯನ್ನು ಉತ್ತಮವಾಗಿಯೇ ಪ್ರಾರಂಭಿಸಿ, 70 ಓವರ್ ಗಳವರೆಗೆ ಸುಸ್ಥಿತಿಯಲ್ಲೇ ಇದ್ದರು. ಆದರೆ, ಕೊನೆಯ 25 ಓವರ್ ಗಳಲ್ಲಿ @Gmaxi_32 ಪ್ರದರ್ಶಿಸಿದ ಆಟ ಅವರ ಹಣೆಬರಹವನ್ನೇ ಬದಲಿಸಿಬಿಟ್ಟಿತು. ಈ ಪ್ರದರ್ಶನವು ಗರಿಷ್ಠ ಒತ್ತಡದಿಂದ ಹೊರಬಂದ ಗರಿಷ್ಠ ಪ್ರದರ್ಶನವಾಗಿತ್ತು! ನಾನು ಈವರೆಗೆ ನನ್ನ ಜೀವನದಲ್ಲಿ ನೋಡಿದ ಏಕದಿನ ಪಂದ್ಯದಲ್ಲಿನ ಅತ್ಯುತ್ತಮ ಬ್ಯಾಟಿಂಗ್ ಇದಾಗಿತ್ತು” ಎಂದು ತೆಂಡೂಲ್ಕರ್ ಪ್ರಶಂಸಿಸಿದ್ದಾರೆ.
ವೀರೇಂದ್ರ ಸೆಹ್ವಾಗ್, ಈ ಇನಿಂಗ್ಸ್ ದೀರ್ಘಕಾಲ ನೆನಪಿನಲ್ಲುಳಿಯಲಿದೆ ಎಂದು ಹೇಳಿದ್ದಾರೆ.
“ದೊಡ್ಡ ಮೊತ್ತವನ್ನು ಬೆನ್ನಟ್ಟಿರುವಾಗ 200 ರನ್ ಗಳಿಸಿದ್ದನ್ನು ನಾನು ಕಂಡೆ. ಮ್ಯಾಕ್ಸ್ ವೆಲ್ ಪ್ರದರ್ಶಿಸಿದ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನವಿದು. ಈ ಪ್ರದರ್ಶನಕ್ಕೆ @Gmaxi_32 ಅರ್ಹವಾಗಿದ್ದರು ಹಾಗೂ @patcummins30 ಅವರಿಗೆ ಅದ್ಭುತ ಬೆಂಬಲ ನೀಡಿದರು. ದೀರ್ಘಕಾಲ ನೆನಪಿಡಬೇಕಾದ ಇನಿಂಗ್ಸ್ ಇದು” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ವೀರೇಂದ್ರ ಸೆಹ್ವಾಗ್ ಪೋಸ್ಟ್ ಮಾಡಿದ್ದಾರೆ.
ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮಾತ್ರವಲ್ಲದೆ ವಾಸೀಂ ಅಕ್ರಮ್, ಬೆನ್ ಸ್ಟೊಕ್ಸ್, ವಾಸೀಂ ಜಾಫರ್, ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಸೇರಿದಂತೆ ಹಲವಾರು ಕ್ರಿಕೆಟ್ ದಿಗ್ಗಜರು ಮ್ಯಾಕ್ಸ್ ವೆಲ್ ಅವರ ಪ್ರದರ್ಶನವನ್ನು ಕೊಂಡಾಡಿದ್ದಾರೆ.