ಗಾಲ್ಫ್ ಕಾರ್ಟ್ನಿಂದ ಬಿದ್ದು ಮ್ಯಾಕ್ಸ್ವೆಲ್ಗೆ ಗಾಯ: ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ಅಲಭ್ಯ
ಗ್ಲೆನ್ ಮ್ಯಾಕ್ಸ್ವೆಲ್ (PTI)
ಹೊಸದಿಲ್ಲಿ: ಆಸ್ಟ್ರೇಲಿಯ ತಂಡ ನ.4ರಂದು ಅಹ್ಮದಾಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅನುಪಸ್ಥಿತಿಯಲ್ಲಿ ಆಡಲಿದೆ. ಆಲ್ರೌಂಡರ್ ಮ್ಯಾಕ್ಸ್ವೆಲ್ ಗಾಲ್ಫ್ ಕಾರ್ಟ್ನಿಂದ ಬಿದ್ದು ಗಾಯಗೊಂಡ ಕಾರಣ ಪಂದ್ಯಕ್ಕೆ ಲಭ್ಯವಿರುವುದಿಲ್ಲ.
ಸೋಮವಾರ ಕ್ಲಬ್ ಹೌಸ್ನಿಂದ ಟೀಮ್ ಬಸ್ನತ್ತ ತೆರಳಲು ಮ್ಯಾಕ್ಸ್ವೆಲ್ ಗಾಲ್ಫ್ ಕಾರ್ಟ್ನ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದಾಗ ಬಿದ್ದು ಮುಖಕ್ಕೆ ಗಾಯವಾಗಿದೆ. ಮುಂದಿನ ಆರರಿಂದ ಎಂಟು ದಿನಗಳ ಕಾಲ ಅವರು ವಿಶ್ರಾಂತಿ ಪಡೆಯಲಿದ್ದು, ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಅವರ ಬದಲಿಗೆ ಯಾವ ಆಟಗಾರನನ್ನು ಆಯ್ಕೆ ಮಾಡಲಾಗಿಲ್ಲ ಎಂದು cricket.com.au ವರದಿ ಮಾಡಿದೆ.
ಆಸ್ಟ್ರೇಲಿಯ ಆಟಗಾರರು ನ್ಯೂಝಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ವಾರದ ವಿರಾಮದ ವೇಳೆ ಗಾಲ್ಫ್ ಕಾರ್ಟ್ನಲ್ಲಿ ಸವಾರಿ ಮಾಡುವ ಮೂಲಕ ಆನಂದಿಸುತ್ತಿದ್ದಾರೆ. ಮ್ಯಾಕ್ಸ್ವೆಲ್ ಈ ವರ್ಷ ಎರಡನೇ ಬಾರಿ ಅನಿರೀಕ್ಷಿತವಾಗಿ ಗಾಯಗೊಂಡಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ಮೆಲ್ಬೋರ್ನ್ನಲ್ಲಿ ಹುಟ್ಟುಹಬ್ಬದ ಆಚರಣೆ ನಡೆಸುತ್ತಿದ್ದಾಗ ಅವರ ಕಾಲಿಗೆಗಾಯವಾಗಿತ್ತು. ಅದರಿಂದ ಅವರು ಇನ್ನೂ ಸಂಪೂರ್ಣ ಗುಣಮುಖವಾಗಿಲ್ಲ.
ಆಸ್ಟ್ರೇಲಿಯ ತಂಡದ ಪ್ರಮುಖ ಆಲ್ರೌಂಡರ್ ಆಗಿರುವ ಮ್ಯಾಕ್ಸ್ವೆಲ್ ಅವರು ಆಡಮ್ ಝಾಂಪಾ ಜೊತೆಗೆ ಸ್ಪಿನ್ ದಾಳಿಯನ್ನು ಮುನ್ನಡೆಸುತ್ತಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸರದಿಯಲ್ಲಿ ನಿರ್ಣಾಯಕವಾಗಿದ್ದರು. ಮ್ಯಾಕ್ಸ್ವೆಲ್ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಕೇವಲ 40 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಗಳಿಸಿದ್ದರು.