ಭಾರತದ ಟ್ವೆಂಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸುವ ವಿಶ್ವಾಸದಲ್ಲಿ ಮಯಾಂಕ್ ಯಾದವ್?
ಮಯಾಂಕ್ ಯಾದವ್ | Photo: X \ @WasimJaffer14
ಹೊಸದಿಲ್ಲಿ : ಭಾರತದ ಯುವ ವೇಗದ ಬೌಲರ್ ಮಯಾಂಕ್ ಯಾದವ್ ಕೇವಲ ವೇಗವಾಗಿ ಬೌಲಿಂಗ್ ಮಾಡುವುದು ಮಾತ್ರವಲ್ಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಅದರಲ್ಲೂ ಮುಖ್ಯವಾಗಿ ಮುಂಬರುವ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸುವ ವಿಶ್ವಾಸದಲ್ಲಿದ್ದಾರೆ.
ವೃತ್ತಿಜೀವನದಲ್ಲಿ ಕೇವಲ ಎರಡು ಐಪಿಎಲ್ ಪಂದ್ಯಗಳನ್ನಾಡಿರುವ ಲಕ್ನೊ ಸೂಪರ್ ಜಯಂಟ್ಸ್ ವೇಗಿ ಮಯಾಂಕ್ ಯಾದವ್ ದಿಲ್ಲಿ ಮೂಲದವರು. ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರನ್ನು ತನ್ನತ್ತ ಸೆಳೆದಿರುವುದಲ್ಲದೆ, ತಾನು ಬೌಲಿಂಗ್ ಮಾಡಿರುವ ಪ್ರತಿಯೊಬ್ಬ ಬ್ಯಾಟರ್ಗಳ ವಿರುದ್ಧ ನಿಖರವಾದ ಲೈನ್ ಹಾಗೂ ಲೆನ್ತ್ ನಲ್ಲಿ ಚೆಂಡನ್ನು ಎಸೆದು ಬೆಂಬಿಡದೆ ಕಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ವಿರುದ್ಧ ಮಂಗಳವಾರ ಲಕ್ನೊ ಆಡಿರುವ ಪಂದ್ಯದಲ್ಲಿ ಬಲಗೈ ವೇಗದ ಬೌಲರ್ ಮಯಾಂಕ್ 14 ರನ್ ಗೆ ಮೂರು ವಿಕೆಟ್ ಗಳನ್ನು ಕಬಳಿಸಿ ಅಗ್ರ ಸರದಿಗೆ ಸವಾಲಾಗಿದ್ದರು. ಆರ್ಸಿಬಿಯನ್ನು ಅದರ ತವರು ಮೈದಾನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಮಣಿಸಲು ಲಕ್ನೊಗೆ ನೆರವಾಗಿದ್ದರು. ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
ಮಯಾಂಕ್ ಜೂನ್ನಲ್ಲಿ ವೆಸ್ಟ್ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ನಲ್ಲಿ ಸಂಭಾವ್ಯ ಆಟಗಾರನಾಗುವ ಕುರಿತು ಚರ್ಚೆ ನಡೆಯುತ್ತಿದೆ. ಟ್ವೆಂಟಿ-20 ವಿಶ್ವಕಪ್ ಬಗ್ಗೆ ಮಾತನಾಡುವಾಗ ಡೆತ್ನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ಆಟಗಾರನ ಬಗ್ಗೆ ಚರ್ಚಿಸಬೇಕಾಗುತ್ತದೆ ಎಂದು ಆಸ್ಟ್ರೇಲಿಯದ ಮಾಜಿ ಆಲ್ರೌಂಡರ್ ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಮಯಾಂಕ್ ಪ್ರಸಕ್ತ ಫಾರ್ಮನ್ನು ಐಪಿಎಲ್ ಟೂರ್ನಮೆಂಟ್ನಲ್ಲಿ ಕಾಯ್ದುಕೊಂಡರೆ ಅವರು ಖಂಡಿತವಾಗಿಯೂ ಐಪಿಎಲ್ ಅಂತ್ಯಗೊಂಡ ಆರು ದಿನಗಳಲ್ಲಿ ಆರಂಭವಾಗಲಿರುವ ವಿಶ್ವಕಪ್ಗೆ ಭಾರತ ತಂಡದ ಆಯ್ಕೆಗೆ ಪರಿಗಣಿಸಲ್ಪಡಬಹುದು ಎಂದು ಮಿಚೆಲ್ ಮೆಕ್ಕ್ಲೆನಘನ್ ಹೇಳಿದ್ದಾರೆ.
21ರ ವಯಸ್ಸಿನ ಮಯಾಂಕ್ ಯಾದವ್ ಐಪಿಎಲ್ ಇತಿಹಾಸದಲ್ಲಿ ತಾನಾಡಿದ ಮೊದಲೆರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಮೊದಲ ಬೌಲರ್ ಆಗಿದ್ದಾರೆ.
ಆರ್ಸಿಬಿ ವಿರುದ್ಧ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿ ಪ್ರಸಕ್ತ ಋತುವಿನಲ್ಲಿ ವೇಗವಾಗಿ ಬೌಲಿಂಗ್ ಮಾಡಿರುವ ಯಾದವ್ ಪಂಜಾಬ್ ಕಿಂಗ್ಸ್ ವಿರುದ್ಧ ತಾನಾಡಿರುವ ಚೊಚ್ಚಲ ಪಂದ್ಯದಲ್ಲಿ ನಿರ್ಮಿಸಿರುವ ತನ್ನದೇ ದಾಖಲೆಯನ್ನು ಮುರಿದಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಗಂಟೆಗೆ 155.8 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದು 4 ಓವರ್ ಗಳಲ್ಲಿ 27 ರನ್ ಗೆ 3 ವಿಕೆಟ್ ಗಳನ್ನು ಕಬಳಿಸಿದ್ದರು.