ಪುರುಷರ ಹಾಕಿ: ಉಜ್ಬೇಕಿಸ್ತಾನದ ವಿರುದ್ಧ ಗೋಲಿನ ಮಳೆ ಸುರಿಸಿದ ಭಾರತ
Photo: twitter/DilipTirkey
ಹಾಂಗ್ಝೌ: ಉಜ್ಬೇಕಿಸ್ತಾನ ವಿರುದ್ಧ ಗೋಲಿನ ಮಳೆ ಸುರಿಸಿ 16-0 ಅಂತರದಿಂದ ಜಯ ಸಾಧಿಸಿರುವ ಭಾರತೀಯ ಪುರುಷರ ಹಾಕಿ ತಂಡ ಏಶ್ಯನ್ ಗೇಮ್ಸ್ ನಲ್ಲಿ ಶುಭಾರಂಭ ಮಾಡಿದೆ.
ರವಿವಾರ ನಡೆದ ಪಂದ್ಯದಲ್ಲಿ ಲಲಿತ್ ಉಪಾಧ್ಯಾಯ, ವರುಣ್ ಕುಮಾರ್ ಹಾಗೂ ಮನ್ದೀಪ್ ಸಿಂಗ್ ಹ್ಯಾಟ್ರಿಕ್ ಗಳಿಸಿದರು. ಎ ಗುಂಪಿನ ಪಂದ್ಯದಲ್ಲಿ ಭಾರತವು ಆರಂಭದಿಂದಲೇ ಪ್ರಾಬಲ್ಯ ಮೆರೆಯಿತು. ವಿಶ್ವದ ನಂ.3ನೇ ತಂಡ ಭಾರತವು 66ನೇ ರ್ಯಾಂಕಿನ ಉಜ್ಬೇಕಿಸ್ತಾನ ವಿರುದ್ಧ ಗೆಲ್ಲುವ ಫೇವರಿಟ್ ತಂಡವಾಗಿತ್ತು.
ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ ಭಾರತದ ಪರ ಲಲಿತ್ ಉಪಾಧ್ಯಾಯ 7ನೇ, 24ನೇ 37ನೇ ಹಾಗೂ 53ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ವರುಣ್ ಕೂಡ 12ನೇ, 36ನೇ, 50ನೇ ಹಾಗೂ 52ನೇ ನಿಮಿಷದಲ್ಲಿ ನಾಲ್ಕು ಗೋಲು ಗಳಿಸಿದರು. ಮನ್ದೀಪ್ ಸಿಂಗ್ 18ನೇ, 27ನೇ ಹಾಗೂ 28ನೇ ನಿಮಿಷದಲ್ಲಿ ಗೋಲು ಗಳಿಸಿದರು. ಅಭಿಷೇಕ್(17ನೇ ನಿ.), ಅಮಿತ್ ರೋಹಿದಾಸ್(38ನೇ ನಿ.),ಸುಖಜೀತ್(42ನೇ ನಿ.), ಶಂಶೇರ್ ಸಿಂಗ್(43ನೇ ನಿ.) ಹಾಗೂ ಸಂಜಯ್(57ನೇ ನಿ.)ಭಾರತದ ಗೋಲನ್ನು ಹೆಚ್ಚಿಸಿದರು.
ಏಶ್ಯನ್ ಗೇಮ್ಸ್ ನಲ್ಲಿ ಬಾಕ್ಸರ್ ಲವ್ಲೀನಾ ಬೋರ್ಗೊಹೈನ್ ಜೊತೆ ಧ್ವಜಧಾರಿಯಾಗಿದ್ದ ಭಾರತದ ನಾಯಕ ಹರ್ಮನ್ಪ್ರೀತ್ ಸಿಂಗ್ ಇಂದಿನ ಪಂದ್ಯದಲ್ಲಿ ಆಡಲಿಲ್ಲ.ಭಾರತವು ಮಂಗಳವಾರ ಸಿಂಗಾಪುರ ವಿರುದ್ಧ ಪಂದ್ಯವನ್ನಾಡಲಿದೆ.