ಮಿಲ್ಲರ್ ಅಬ್ಬರದ ಬ್ಯಾಟಿಂಗ್ ವ್ಯರ್ಥ| ಕಿವೀಸ್ ಫೈನಲ್ ಗೆ, ದಕ್ಷಿಣ ಆಫ್ರಿಕಾ ಮನೆಗೆ
ರವೀಂದ್ರ, ವಿಲಿಯಮ್ಸನ್ ಶತಕ

PC : PTI
ಲಾಹೋರ್: ಆಕ್ರಮಣಕಾರಿ ಆಟಗಾರ ಡೇವಿಡ್ ಮಿಲ್ಲರ್ ಶತಕ (ಔಟಾಗದೆ 100 ರನ್,67 ಎಸೆತ, 10 ಬೌಂಡರಿ, 4 ಸಿಕ್ಸರ್) ರಾಸ್ಸಿ ವಾನ್ಡರ್ ಡುಸ್ಸೆನ್(69 ರನ್, 66 ಎಸೆತ),ಟೆಂಬಾ ಬವುಮಾ(56 ರನ್, 71 ಎಸೆತ) ಅರ್ಧಶತಕಗಳ ಕೊಡುಗೆಯ ಹೊರತಾಗಿಯೂ ನ್ಯೂಝಿಲ್ಯಾಂಡ್ ತಂಡದ ಆಲ್ರೌಂಡ್ ಪ್ರದರ್ಶನಕ್ಕೆ ತತ್ತರಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ 50 ರನ್ ಅಂತರದಿಂದ ಸೋಲುಂಡಿದೆ.
ಬುಧವಾರ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ ತಂಡವು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 362 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 312 ರನ್ ಗಳಿಸಿ ಸೋಲೊಪ್ಪಿಕೊಂಡಿತು.
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಸೋಲಿನ ಅಂತರ ಕುಗ್ಗಿಸಿದರು.
ಈ ಗೆಲುವಿನ ಮೂಲಕ ಕಿವೀಸ್ ಪಡೆ ಫೈನಲ್ಗೆ ಪ್ರವೇಶಿಸಿದ್ದು, ಮಾ.9ರಂದು ರವಿವಾರ ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಸವಾಲನ್ನು ಎದುರಿಸಲಿದೆ.
ದಕ್ಷಿಣ ಆಫ್ರಿಕಾ ತಂಡವು ಆರಂಭಿಕ ಆಟಗಾರ ರಿಕೆಲ್ಟನ್(17 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ 2ನೇ ವಿಕೆಟ್ಗೆ 105 ರನ್ ಸೇರಿಸಿದ ಡುಸ್ಸೆನ್(69 ರನ್)ಹಾಗೂ ಬವುಮಾ(56 ರನ್)ತಂಡವನ್ನು ಆಧರಿಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ನಂತರ ಹರಿಣ ಪಡೆ ಕುಸಿತದ ಹಾದಿ ಹಿಡಿಯಿತು.
ಮರ್ಕ್ರಮ್(31 ರನ್,29 ಎಸೆತ) ಹಾಗೂ ಡೇವಿಡ್ ಮಿಲ್ಲರ್(ಔಟಾಗದೆ 100 ರನ್) ಒಂದಷ್ಟು ಹೋರಾಡಿದರೂ ಇದು ಗೆಲುವಿಗೆ ಸಾಕಾಗಲಿಲ್ಲ.
ನ್ಯೂಝಿಲ್ಯಾಂಡ್ ಪರ ನಾಯಕ ಮಿಚೆಲ್ ಸ್ಯಾಂಟ್ನರ್(3-43)ಯಶಸ್ವಿ ಪ್ರದರ್ಶನ ನೀಡಿದರು. ಗ್ಲೆನ್ ಫಿಲಿಪ್ಸ್(2-27) ಹಾಗೂ ಮ್ಯಾಟ್ ಹೆನ್ರಿ(2-43) ತಲಾ ಎರಡು ವಿಕೆಟ್ಗಳನ್ನು ಪಡೆದರು. ಬ್ರೆಸ್ವೆಲ್(1-53) ಹಾಗೂ ರವೀಂದ್ರ(1-20) ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು.
ರವೀಂದ್ರ, ವಿಲಿಯಮ್ಸನ್ ಶತಕ, ನ್ಯೂಝಿಲ್ಯಾಂಡ್ 362/6
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಝಿಲ್ಯಾಂಡ್ ತಂಡವು ರಚಿನ್ ರವೀಂದ್ರ ಹಾಗೂ ಕೇನ್ ವಿಲಿಯಮ್ಸನ್ ಅವರ ಆಕರ್ಷಕ ಶತಕದ ಸಹಾಯದಿಂದ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 362 ರನ್ ಗಳಿಸಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಗಳಿಸಿದೆ. ಇತ್ತೀಚೆಗೆ ಇದೇ ಟೂರ್ನಿಯಲ್ಲಿ ಆಸ್ಟ್ರೇಲಿಯ ನಿರ್ಮಿಸಿದ್ದ ದಾಖಲೆ(5 ವಿಕೆಟ್ಗೆ 356 ರನ್)ಮುರಿದಿದೆ.
ರವೀಂದ್ರ 101 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 108 ರನ್ ಗಳಿಸಿದರೆ, ವಿಲಿಯಮ್ಸನ್ ಕೇವಲ 94 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 102 ರನ್ ಗಳಿಸಿ ಔಟಾದರು.
ಯುವ ಎಡಗೈ ಬ್ಯಾಟರ್ ರವೀಂದ್ರ ಕೇವಲ 93 ಎಸೆತಗಳಲ್ಲಿ ತನ್ನ 5ನೇ ಶತಕ ಗಳಿಸಿದರೆ, ವಿಲಿಯಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದರು. ಇದು ಅವರ 15ನೇ ಏಕದಿನ ಶತಕವಾಗಿದೆ.
ಇನಿಂಗ್ಸ್ ಆರಂಭಿಸಿದ ವಿಲ್ ಯಂಗ್(21 ರನ್, 23 ಎಸೆತ)ಹಾಗೂ ರವೀಂದ್ರ 7.5 ಓವರ್ಗಳಲ್ಲಿ 48 ರನ್ ಕಲೆ ಹಾಕಿ ಉತ್ತಮ ಆರಂಭ ಒದಗಿಸಿದರು. ವೇಗದ ಬೌಲರ್ ಲುಂಗಿ ಗಿಡಿ 8ನೇ ಓವರ್ನಲ್ಲಿ ಈ ಜೋಡಿಯನ್ನು ಬೇರ್ಪಡಿಸಿದರು.
ಆಗ ಎರಡನೇ ವಿಕೆಟ್ಗೆ 164 ರನ್ ಜೊತೆಯಾಟ ನಡೆಸಿದ ವಿಲಿಯಮ್ಸನ್ ಹಾಗೂ ರವೀಂದ್ರ ಕಿವೀಸ್ಗೆ ಭದ್ರ ಬುನಾದಿ ಹಾಕಿಕೊಟ್ಟರು.
ಸ್ಲಾಗ್ ಓವರ್ಗಳಲ್ಲಿ ಡ್ಯಾರಿಲ್ ಮಿಚೆಲ್(49 ರನ್, 37 ಎಸೆತ, 4 ಬೌಂಡರಿ, 1 ಸಿಕ್ಸರ್)ಹಾಗೂ ಗ್ಲೆನ್ ಫಿಲಿಪ್ಸ್(ಔಟಾಗದೆ 49, 27 ಎಸೆತ, 6 ಬೌಂಡರಿ, 1 ಸಿಕ್ಸರ್)ಬಿರುಸಿನ ಬ್ಯಾಟಿಂಗ್ ಮಾಡಿ ನ್ಯೂಝಿಲ್ಯಾಂಡ್ ತಂಡ 362 ರನ್ ಕಲೆ ಹಾಕುವಲ್ಲಿ ನೆರವಾದರು. ಈ ಜೋಡಿ 5ನೇವಿಕೆಟ್ನಲ್ಲಿ ಕೇವಲ 30 ಎಸೆತಗಳಲ್ಲಿ 57 ರನ್ ಜೊತೆಯಾಟ ನಡೆಸಿದರು.
ಮಿಚೆಲ್ ಕೇವಲ 1 ರನ್ನಿಂದ ಅರ್ಧಶತಕ ವಂಚಿತರಾದರು. ಆಲ್ರೌಂಡರ್ ಬ್ರೆಸ್ವೆಲ್ ಹಾಗೂ ಫಿಲಿಪ್ಸ್ 6ನೇ ವಿಕೆಟ್ನಲ್ಲಿ 22 ಎಸೆತಗಳಲ್ಲಿ 46 ರನ್ ಸೇರಿಸಿ ಕಿವೀಸ್ ಮೊತ್ತವನ್ನು ಹಿಗ್ಗಿಸಿದರು. ಫಿಲಿಪ್ಸ್ ಡೆತ್ ಓವರ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ದು ಕಿವೀಸ್ ಮೊತ್ತವನ್ನು 350ರ ಗಡಿ ದಾಟಿಸಿದರು.
ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗದಲ್ಲಿ ಲುಂಗಿ ಗಿಡಿ(3-72) ಯಶಸ್ವಿ ಪ್ರದರ್ಶನ ನೀಡಿದರೆ, ಕಾಗಿಸೊ ರಬಾಡ(2-70) ಹಾಗೂ ವಿಯಾನ್ ಮುಲ್ದರ್(1-48)ಮೂರು ವಿಕೆಟ್ಗಳನ್ನು ಹಂಚಿಕೊಂಡರು.ರಬಾಡ 70 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.
ದಕ್ಷಿಣ ಆಫ್ರಿಕಾ: 50 ಓವರ್ಗಳಲ್ಲಿ 312/9
(ಡೇವಿಡ್ ಮಿಲ್ಲರ್ ಔಟಾಗದೆ 100, ರಾಸ್ಸಿ ವಾನ್ಡರ್ ಡುಸ್ಸೆನ್ 69, ಟೆಂಬಾ ಬವುಮಾ 56, ಮರ್ಕ್ರಮ್ 31, ಸ್ಯಾಂಟ್ನರ್ 3-43, ಫಿಲಿಪ್ಸ್ 2-27, ಹೆನ್ರಿ 2-43)