ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅನುಚಿತ ವರ್ತನೆ: ರಹಮಾನುಲ್ಲಾ ಗುರ್ಬಾಜ್ಗೆ ವಾಗ್ದಂಡನೆ
Photo:twitter/sachin_rt
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ರವಿವಾರ ಹೊಸದಿಲ್ಲಿಯಲ್ಲಿ ನಡೆದ ವಿಶ್ವಕಪ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಅವರಿಗೆ ವಾಗ್ದಾಂಡನೆ ವಿಧಿಸಲಾಗಿದೆ.
ಗುರ್ಬಾಜ್ ಅವರು ಸಂಹಿತೆಯ ವಿಧಿ 2.2 ಉಲ್ಲಂಘಿಸಿದ್ದಾರೆ. ಇದು ಅಂತರ್ರಾಷ್ಟ್ರೀಯ ಪಂದ್ಯದ ವೇಳೆ ಕ್ರಿಕೆಟ್ ಪರಿಕರ, ಧಿರಿಸು ಜೊತೆ ಒರಟು ವರ್ತನೆಗೆ ಸಂಬಂಧಿಸಿದ್ದಾಗಿದೆ. ಅವರ ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಅಂಕ ಕೂಡ ಸೇರ್ಪಡೆಯಾಗಲಿದೆ. ಇದು ಅವರಿಗೆ 24 ತಿಂಗಳ ಅವಧಿಯಲ್ಲಿ ಮೊದಲನೆಯ ಡಿಮೆರಿಟ್ ಅಂಕ.
ಪಂದ್ಯದ 19ನೇ ಓವರ್ ವೇಳೆ ಈ ಘಟನೆ ನಡೆದಿತ್ತು. ಔಟ್ ಆದ ನಂತರ ಪೆವಿಲಿಯನ್ಗೆ ಮರಳುವಾಗ ಬೌಂಡರಿ ರೋಪ್ ಬಳಿ ಗುರ್ಬಾಜ್ ತಮ್ಮ ಬ್ಯಾಟನ್ನು ನೆಲಕ್ಕೆ ಹಾಗೂ ಕುರ್ಚಿಗೆ ಬಡಿದು ಹತಾಶೆ ವ್ಯಕ್ತಪಡಿಸಿದ್ದರು.
ಗುರ್ಬಾಝ್ ತಪ್ಪು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ಜೆಫ್ ಕ್ರೋವ್ ಅವರ ದಂಡನೆಗೆ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಫೀಲ್ಡ್ ಅಂಪೈರ್ಗಳಾದ ರಾಡ್ ಟಕ್ಕರ್, ಶರ್ಫುದ್ದೌಲಾ ಶಾಹಿದ್, ಮೂರನೇ ಅಂಪೈರ್ ಪಾಲ್ ರೀಫೆಲ್ ಹಾಗೂ ನಾಲ್ಕನೇ ಅಂಪೈರ್ ಪಾಲ್ ವಿಲ್ಸನ್ ದೂರು ದಾಖಲಿಸಿದ್ದರು.
ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಇಂಗ್ಲೆಂಡ್ ತಂಡವನ್ನು 69 ರನ್ ಗಳಿಂದ ಸೋಲಿಸಿ ಆಘಾತ ನೀಡಿತ್ತು.