ನನ್ನಿಂದಲೇ ತಪ್ಪಾಗಿದೆ, ಪ್ರಶಸ್ತಿ ನನ್ನ ಗುರಿಯಲ್ಲ: ಮನು ಭಾಕರ್
ಮನು ಭಾಕರ್ | PTI
ಹೊಸದಿಲ್ಲಿ : ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗಾಗಿ ಅರ್ಜಿಯನ್ನು ಭರ್ತಿ ಮಾಡುವಾಗ ನನ್ನಿಂದ ತಪ್ಪಾಗಿದೆ ಎಂದು ಒಲಿಂಪಿಕ್ಸ್ ನಲ್ಲಿ ಅವಳಿ ಪದಕ ವಿಜೇತೆ ಮನು ಭಾಕರ್ ಮಂಗಳವಾರ ಹೇಳಿದ್ದಾರೆ.
ಖೇಲ್ರತ್ನ ಪ್ರಶಸ್ತಿ ಶಿಫಾರಸು ಪಟ್ಟಿಯಲ್ಲಿ ತನ್ನ ಹೆಸರನ್ನು ನಿರ್ಲಕ್ಷಿಸಿದ್ದಕ್ಕೆ ವಿವಾದ ಉಂಟಾಗಿರುವಾಗಲೇ ಈ ಹೇಳಿಕೆ ನೀಡಿದ್ದಾರೆ.
ಪ್ರಶಸ್ತಿ ಆಯ್ಕೆ ಸಮಿತಿಯು ಮನು ಭಾಕರ್ ಅವರನ್ನು ನಾಮನಿರ್ದೇಶನ ಪಟ್ಟಿಯಿಂದ ಹೊರಗಿಟ್ಟು ಅಚ್ಚರಿ ಹೆಜ್ಜೆ ಇಟ್ಟ ನಂತರ ಕ್ರೀಡಾ ಸಚಿವಾಲಯವು ಮಧ್ಯಪ್ರವೇಶಿಸಿ ಹಾನಿ ನಿಯಂತ್ರಿಸಲು ಪ್ರಯತ್ನಿಸಿದ್ದು, ಈ ನಡುವೆ 22ರ ಹರೆಯದ ಶೂಟಿಂಗ್ ಚಾಂಪಿಯನ್ ಭಾಕರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತನ್ನ ನಿಲುವನ್ನು ವಿವರಿಸಿದ್ದಾರೆ.
ಅತ್ಯಂತ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ನನ್ನ ನಾಮನಿರ್ದೇಶನದ ಕುರಿತು ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿ ಸ್ಪಷ್ಟೀಕರಣ ನೀಡಲು ಬಯಸುವೆ. ಕ್ರೀಡಾಪಟುವಾಗಿ ನನ್ನ ದೇಶದ ಪರ ಆಡಿ ಉತ್ತಮ ಪ್ರದರ್ಶನ ನೀಡುವುದು ನನ್ನ ಕೆಲಸ. ನನ್ನ ಪ್ರಕಾರ ಕೆಲವೊಂದು ತಪ್ಪಾಗಿರಬಹುದು. ಬಹುಶಃ ಅರ್ಜಿ ಸಲ್ಲಿಸುವಾಗ ನನ್ನಿಂದಲೇ ತಪ್ಪಾಗಿರಲೂಬಹುದು. ಅದನ್ನು ಸರಿಪಡಿಸಲಾಗುವುದು ಎಂದು ಭಾಕರ್ ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.
ಪ್ರಶಸ್ತಿಗಳು ಹಾಗೂ ಗುರುತಿಸುವಿಕೆ ನನ್ನನ್ನು ಇನ್ನಷ್ಟು ಹುರಿದುಂಬಿಸುತ್ತದೆ. ಆದರೆ ಉತ್ತಮ ಪ್ರದರ್ಶನ ನೀಡುವತ್ತ ಗಮನ ನೀಡುವತ್ತ ಹೆಚ್ಚು ಒತ್ತು ನೀಡುವೆ. ಪ್ರಶಸ್ತಿಗಾಗಿ ಪ್ರತಿಯೊಬ್ಬರು ಮನವಿ ಮಾಡುತ್ತಿದ್ದಾರಷ್ಟೇ. ದಯವಿಟ್ಟು ಈ ಕುರಿತು ಊಹಾಪೋಹ ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ.
ಭಾಕರ್ ಅವರ ಕೋಚ್ ಜಸ್ ಪಾಲ್ ರಾಣಾ ಹಾಗೂ ಅವರ ತಂದೆ ರಾಮ್ಕಿಶನ್ ಭಾಕರ್ ಅವರು ಮನು ಭಾಕರ್ ಅವರು ಮಹತ್ವದ ಸಾಧನೆಗಳನ್ನು ಕಡೆಗಣಿಸಿದ್ದಕ್ಕೆ ಕ್ರೀಡಾ ಸಚಿವಾಲಯ ಹಾಗೂ ಆಯ್ಕೆ ಸಮಿತಿಯನ್ನು ಟೀಕಿಸಿದ ಹಿನ್ನೆಲೆಯಲ್ಲಿ ಮನು ಭಾಕರ್ ಈ ಹೇಳಿಕೆ ನೀಡಿದ್ದಾರೆ.