2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಆಡಲು ಅವಕಾಶ ನೀಡದ್ದಕ್ಕೆ ವಿರಾಟ್ ಕೊಹ್ಲಿ, ರವಿಶಾಸ್ತ್ರಿ ವಿರುದ್ಧ ಪರೋಕ್ಷ ಅಸಮಾಧಾನ ಹೊರ ಹಾಕಿದ ಶಮಿ
ಮೂರು ಪಂದ್ಯಗಳಿಂದ 13 ವಿಕೆಟ್ ಕಿತ್ತರೂ ಸೆಮಿಫೈನಲ್ ಪಂದ್ಯದಿಂದ ಅವಕಾಶ ವಂಚಿತರಾಗಿದ್ದ ವೇಗಿ
ಮುಹಮ್ಮದ್ ಶಮಿ (PTI)
ಹೊಸದಿಲ್ಲಿ: 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ನೀಡದ್ದಕ್ಕೆ ಆಗ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ವಿರುದ್ಧ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಮ್ಯಾಂಚೆಸ್ಟರ್ನಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಮುಹಮ್ಮದ್ ಶಮಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದೆ, ಇಬ್ಬರು ವೇಗದ ಬೌಲರ್ ಹಾಗೂ ಓರ್ವ ಸ್ಪಿನ್ನರ್ನೊಂದಿಗೆ ತಂಡದ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದರು. ಆದರೆ, ಆ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ನೀಡಿದ್ದ 240 ರನ್ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 49.3 ಓವರ್ಗಳಲ್ಲಿ ಕೇವಲ 221 ರನ್ ಗಳಿಸಿ ಆಲೌಟ್ ಆಗಿತ್ತು. 18 ರನ್ಗಳ ಅಂತರದಿಂದ ಗೆಲುವು ಸಾಧಿಸಿದ್ದ ಆತಿಥೇಯ ನ್ಯೂಝಿಲೆಂಡ್ ತಂಡವು ಫೈನಲ್ಗೆ ಲಗ್ಗೆ ಇಟ್ಟಿತ್ತು.
ಈ ಕುರಿತು, ಶುಭಶಂಕರ್ ಮಿಶ್ರಾರ ಪಾಡ್ಕಾಸ್ಟ್ಗೆ ಸಂದರ್ಶನ ನೀಡಿರುವ ಮುಹಮ್ಮದ್ ಶಮಿ, "ನಾನು ಆ ಟೂರ್ನಿಯಲ್ಲಿ ಕೇವಲ ಮೂರು ಪಂದ್ಯಗಳಿಂದ ಹದಿಮೂರು ವಿಕೆಟ್ ಗಳಿಸಿದ್ದೆ. ನೀವು ನನ್ನಿಂದ ಮತ್ತಿನ್ನೇನನ್ನು ಬಯಸಬಲ್ಲಿರಿ?" ಎಂದು ಆ ವಿಶ್ವಕಪ್ಗೆ ಭಾರತ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಹಾಗೂ ತರಬೇತುದಾರ ರವಿಶಾಸ್ತ್ರಿ ಜೋಡಿಗೆ ಪರೋಕ್ಷ ಸವಾಲೆಸೆದಿದ್ದಾರೆ.
"ನನ್ನ ಮನಸ್ಸಿನಲ್ಲೊಂದು ಪ್ರಶ್ನೆ ಮೂಡುತ್ತದೆ. ಯಾವುದೇ ತಂಡಕ್ಕೆ ಉತ್ತಮ ಸಾಧನೆ ಮಾಡಿದ ಆಟಗಾರನ ಅವಶ್ಯಕತೆ ಇರುತ್ತದೆ. ನಾನು ಮೂರು ಪಂದ್ಯಗಳಿಂದ ಹದಿಮೂರು ವಿಕೆಟ್ ಗಳಿಸಿದ್ದೆ. ನನ್ನಿಂದ ನೀವು ಮತ್ತೇನನ್ನು ಬಯಸಬಲ್ಲಿರಿ? ಈ ಕುರಿತು ನನ್ನ ಬಳಿ ಪ್ರಶ್ನೆಯೂ ಇಲ್ಲ, ಅವರ ಬಳಿ ಉತ್ತರವೂ ಇಲ್ಲ. ನನಗೆ ಅವಕಾಶ ನೀಡಿದರೆ ಹೋಗಿ ಅವರ ಬಳಿ ಮಾತನಾಡುತ್ತೇನೆ. ನನ್ನ ಕೈಯಲ್ಲಿ ಚೆಂಡಿದ್ದಾಗ ನಾನು ನನ್ನ ಕೌಶಲವನ್ನು ಪ್ರದರ್ಶಿಸುತ್ತೇನೆ" ಎಂದು ಮುಹಮ್ಮದ್ ಶಮಿ ಹೇಳಿದ್ದಾರೆ.
ಭಾರತದ ಅತ್ಯುತ್ತಮ ವೇಗದ ಬೌಲರ್ಗಳ ಪೈಕಿ ಒಬ್ಬರಾದ ಮುಹಮ್ಮದ್ ಶಮಿ, ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ, ಅಹಮದಾಬಾದ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ತಂಡದೆದುರು ಸೋಲು ಅನುಭವಿಸುವ ಮೂಲಕ ತವರಿನ ಅಭಿಮಾನಿಗಳನ್ನು ನಿರಾಶೆಯ ಕಡಲಿಗೆ ನೂಕಿತ್ತು. ಆ ಮೂಲಕ ಮೂರನೆಯ ಬಾರಿ ವಿಶ್ವಕಪ್ ಜಯಿಸಬೇಕೆಂಬ ಭಾರತ ತಂಡದ ಕನಸು ನುಚ್ಚುನೂರಾಗಿತ್ತು.