ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಬಾರಿ 200ಕ್ಕೂ ಅಧಿಕ ರನ್ : ಸಿಎಸ್ಕೆ ಐತಿಹಾಸಿಕ ಸಾಧನೆ
PC : PTI
ಹೊಸದಿಲ್ಲಿ: ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ತಂಡಗಳ ಪೈಕಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಚುಟುಕು ಮಾದರಿಯ ಪಂದ್ಯದಲ್ಲಿ ಹೆಚ್ಚು ಬಾರಿ 200ಕ್ಕೂ ಅಧಿಕ ರನ್ ಕಲೆಹಾಕಿದೆ. ಈ ಸಾಧನೆಯ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ತನ್ನ ಹೆಸರನ್ನು ಪಡಿಮೂಡಿಸಿದೆ.
ಸಿಎಸ್ಕೆ ತಂಡ ಸನ್ರೈಸರ್ಸ್ ವಿರುದ್ಧ ಚೆನ್ನೈನ ಚಿಪಾಕ್ ಮೈದಾನದಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ 3 ವಿಕೆಟ್ಗಳ ನಷ್ಟಕ್ಕೆ 212 ರನ್ ಗಳಿಸಿದೆ. ಐಪಿಎಲ್ ಟಿ20 ಟೂರ್ನಮೆಂಟ್ನಲ್ಲಿ 35ನೇ ಬಾರಿ 200ಕ್ಕೂ ಅಧಿಕ ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದೆ.
ತನ್ನ ಅಮೋಘ ಪ್ರದರ್ಶನದ ಮೂಲಕ ಸಿಎಸ್ಕೆ ತಂಡ ಹೈದರಾಬಾದ್ ವಿರುದ್ಧ 78 ರನ್ ಅಂತರದಿಂದ ಜಯ ಸಾಧಿಸಿದೆ. ಹೈದರಾಬಾದ್ ತಂಡವನ್ನು 18.5 ಓವರ್ಗಳಲ್ಲಿ ಕೇವಲ 134 ರನ್ಗೆ ಸರ್ವಪತನಗೊಳಿಸುವ ಮೂಲಕ ಈ ಸಾಧನೆ ಮಾಡಿದೆ.
ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ ತಂಡ ಸೊಮರ್ಸೆಟ್ 34 ಬಾರಿ 200 ರನ್ ಗಡಿ ದಾಟಿದೆ. ಸೀಮಿತ ಓವರ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಸೊಮರ್ಸೆಟ್ ತಂಡದ ಬ್ಯಾಟಿಂಗ್ ಸರದಿಯಲ್ಲಿ ಹೊಡಿಬಡಿ ದಾಂಡಿಗರಿದ್ದಾರೆ.
ಕ್ರಿಕೆಟ್ ಶಕ್ತಿ ಕೇಂದ್ರವನ್ನು ಪ್ರತಿನಿಧಿಸುತ್ತಿರುವ ಟೀಮ್ ಇಂಡಿಯಾವು ಟಿ20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 32 ಬಾರಿ 200 ಪ್ಲಸ್ ಸ್ಕೋರ್ ಗಳಿಸಿದೆ. ಸಾಕಷ್ಟು ಬ್ಯಾಟಿಂಗ್ ಪ್ರತಿಭೆಗಳನ್ನು ಹಾಗೂ ಕಟ್ಟಾ ಅಭಿಮಾನಿಗಳನ್ನು ಹೊಂದಿರುವ ಟೀಮ್ ಇಂಡಿಯಾ ಮೈದಾನದಲ್ಲಿ ತನ್ನ ಶ್ರೇಷ್ಠ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಆಗಾಗ ಮಂತ್ರಮುಗ್ದಗೊಳಿಸುತ್ತದೆ.
ಐಪಿಎಲ್ನ ಇನ್ನೊಂದು ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಗಳಿಂದ ಖ್ಯಾತಿ ಗಳಿಸಿದೆ. ಐಪಿಎಲ್ ಇತಿಹಾಸದಲ್ಲಿ 31 ಬಾರಿ 200 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದೆ.
ಇಂಗ್ಲೆಂಡ್ನ ಇನ್ನೊಂದು ಕೌಂಟಿ ತಂಡ ಯಾರ್ಕ್ಶೈರ್ 29 ಬಾರಿ 200 ಪ್ಲಸ್ ಸ್ಕೋರ್ ಗಳಿಸಿದೆ. ಹಲವಾರು ಪ್ರತಿಭಾವಂತ ಕ್ರಿಕೆಟಿಗರನ್ನು ಸೃಷ್ಟಿಸುವುದನ್ನು ಮುಂದುವರಿಸಿದೆ.
ಇಂಗ್ಲೆಂಡ್ನ ಮತ್ತೊಂದು ಕೌಂಟಿ ತಂಡ ಸರ್ರೆ ಟಿ20 ಕ್ರಿಕೆಟ್ನಲ್ಲಿ 28 ಬಾರಿ 200 ಪ್ಲಸ್ ಸ್ಕೋರ್ ದಾಖಲಿಸಿದೆ. ಹಿರಿಯ ಆಟಗಾರರು ಹಾಗೂ ಉದಯೋನ್ಮುಖ ಪ್ರತಿಭೆಗಳ ಮಿಶ್ರಣವಾಗಿರುವ ಸರ್ರೆ ತಂಡ ಸ್ಥಿರವಾಗಿ ರೋಚಕ ಪ್ರದರ್ಶನ ನೀಡುತ್ತಾ ಬಂದಿದೆ. ಈ ಮೂಲಕ ಬ್ಯಾಟಿಂಗ್ನಲ್ಲಿ ಮಹತ್ವದ ಸಾಧನೆ ಮಾಡಲು ಶಕ್ತವಾಗಿದೆ.
ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಬಾರಿ 200 ಪ್ಲಸ್ ಸ್ಕೋರ್ ಗಳಿಸಿದ ತಂಡಗಳು
35-ಚೆನ್ನೈ ಸೂಪರ್ ಕಿಂಗ್ಸ್
34-ಸೊಮರ್ಸೆಟ್
32-ಭಾರತ
31-ಆರ್ಸಿಬಿ
29-ಯಾರ್ಕ್ಶೈರ್
28-ಸರ್ರೆ