ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ರೋಹಿತ್ ಶರ್ಮಾ
300 ಸಿಕ್ಸರ್ ಬಾರಿಸಿದ ಸಾಧನೆ
Photo : twitter/BCCI
ಅಹ್ಮದಾಬಾದ್: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತನ್ನ ಭವ್ಯ ಕ್ರಿಕೆಟ್ ಸಾಧನೆಗೆ ಇನ್ನೊಂದು ಗರಿಯನ್ನು ಸೇರಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 300 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಅವರಾಗಿದ್ದಾರೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಅವರು ತನ್ನ ಇನಿಂಗ್ಸ್ ನಲ್ಲಿ ನಾಲ್ಕನೇ ಸಿಕ್ಸ್ ಬಾರಿಸಿದಾಗ ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡರು. 300ಕ್ಕಿಂತಲೂ ಅಧಿಕ ಏಕದಿನ ಸಿಕ್ಸರ್ ಗಳನ್ನು ಬಾರಿಸಿದ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಮತ್ತು ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿಯನ್ನೊಳಗೊಂಡ ಗುಂಪಿಗೆ ರೋಹಿತ್ ಶರ್ಮ ಸೇರ್ಪಡೆಗೊಂಡರು. ಭಾರತದಲ್ಲಿ ಏಕದಿನ ಸಿಕ್ಸರ್ ಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವವರು ಮಾಜಿ ನಾಯಕ ಎಮ್.ಎಸ್. ಧೋನಿ. ಅವರು 229 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.300ಕ್ಕೂ ಅಧಿಕ ಏಕದಿನ ಸಿಕ್ಸರ್ ಗಳನ್ನು ಬಾರಿಸಿರುವ ಕ್ರಿಕೆಟಿಗರ ಪಟ್ಟಿಯಲ್ಲಿ, ಶಾಹಿದ್ ಅಫ್ರಿದಿ 351 ಸಿಕ್ಸರ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 331 ಸಿಕ್ಸರ್ ಗಳನ್ನು ಸಿಡಿಸಿರುವ ಕ್ರಿಸ್ ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ. ಈಗ 300 ಸಿಕ್ಸರ್ ಗಳೊಂದಿಗೆ ರೋಹಿತ್ ಶರ್ಮಾ ಮೂರನೇ ಸ್ಥಾನವನ್ನು ಸಂಪಾದಿಸಿದ್ದಾರೆ.