ಮುಹಮ್ಮದ್ ಅಮಾನ್ ಶತಕ | ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಎಸಿಸಿ ಅಂಡರ್-19 ಏಶ್ಯಕಪ್ ಟೂರ್ನಿ
ಮುಹಮ್ಮದ್ ಅಮಾನ್ | PC : X
ಶಾರ್ಜಾ: ನಾಯಕ ಮುಹಮ್ಮದ್ ಅಮಾನ್(122 ರನ್, 118 ಎಸೆತ) ಸಿಡಿಸಿದ ಭರ್ಜರಿ ಶತಕ, ಕೆ.ಪಿ. ಕಾರ್ತಿಕೇಯ(57 ರನ್) ಹಾಗೂ ಆಯುಷ್ ಮ್ಹಾತ್ರೆ(54 ರನ್) ಗಳಿಸಿದ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಎಸಿಸಿ ಅಂಡರ್-19 ಏಶ್ಯಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಕ್ರಿಕೆಟ್ ಶಿಶು ಜಪಾನ್ ತಂಡವನ್ನು 211 ರನ್ ಅಂತರದಿಂದ ಮಣಿಸಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 340 ರನ್ ಗುರಿ ಪಡೆದ ಜಪಾನ್ ತಂಡವು ಯಾವ ಹಂತದಲ್ಲೂ ಹೋರಾಟವನ್ನು ನೀಡದೆ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 128 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಬೌಲಿಂಗ್ನಲ್ಲಿ ಎರಡು ವಿಕೆಟ್ಗಳನ್ನು ಕಬಳಿಸಿದ್ದ ಆರಂಭಿಕ ಆಟಗಾರ ಕೆಲ್ಲಿ 111 ಎಸೆತಗಳಲ್ಲಿ 50 ರನ್ ಗಳಿಸಿ ಜಪಾನ್ ಪರ ಅಗ್ರ ಸ್ಕೋರರ್ ಎನಿಸಿಕೊಂಡರು. ಚಾರ್ಲಿಸ್ ಹಿಂಝ್ ಔಟಾಗದೆ 35 ರನ್ ಗಳಿಸಿದರು.
ಭಾರತದ ಪರ ಕಾರ್ತಿಕೇಯ(2-21), ಹಾರ್ದಿಕ್ ರಾಜ್(2-9) ಹಾಗೂ ಚೇತನ್ ಶರ್ಮಾ(2-14) ತಲಾ ಎರಡು ವಿಕೆಟ್ಗಳನ್ನು ಹಂಚಿಕೊಂಡರು. ಅಂತಿಮ ಓವರ್ನಲ್ಲಿ ಚೇತನ್ ಶರ್ಮಾ ಎರಡು ವಿಕೆಟ್ಗಳನ್ನು ಉರುಳಿಸಿದರು.
ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ 43 ರನ್ ಅಂತರದಿಂದ ಸೋತಿದ್ದ ಭಾರತ ತಂಡಕ್ಕೆ ದೊಡ್ಡ ಅಂತರದ ಗೆಲುವಿನ ಅಗತ್ಯವಿತ್ತು. ಆ ನಿಟ್ಟಿನಲ್ಲಿ ಯಶಸ್ವಿಯಾದ ಭಾರತ ತಂಡವು ಎ ಗುಂಪಿನಲ್ಲಿ ಮೊದಲ ಗೆಲುವು ದಾಖಲಿಸಿ ನಿರ್ಣಾಯಕ ಎರಡು ಅಂಕ ಬಾಚಿಕೊಂಡಿತು.
ಬೃಹತ್ ಅಂತರದ ಗೆಲುವು ದಾಖಲಿಸಿರುವ ಭಾರತದ ನೆಟ್ ರನ್ರೇಟ್ ಕೂಡ ಗಣನೀಯವಾಗಿ(+1.680) ಹೆಚ್ಚಳವಾಗಿದೆ. ಆದರೆ ಎ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಯುಎಇ ನಂತರ ಮೂರನೇ ಸ್ಥಾನದಲ್ಲಿದೆ.
ಭಾರತ ತಂಡವು ಬುಧವಾರ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ.
ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಡಿ.6ರಂದು ನಡೆಯಲಿರುವ ಸೆಮಿ ಫೈನಲ್ಗೆ ಅರ್ಹತೆ ಪಡೆಯುತ್ತವೆ. ಫೈನಲ್ ಪಂದ್ಯವು ಡಿ.8ರಂದು ನಡೆಯುವುದು.
*ಭಾರತ 339/6: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಭಾರತ ತಂಡವು ಮಧ್ಯಮ ಸರದಿಯ ಬ್ಯಾಟರ್ ಅಮಾನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 339 ರನ್ ಗಳಿಸಿತು. ಕೇವಲ 118 ಎಸೆತಗಳಲ್ಲಿ 122 ರನ್ ಕಲೆ ಹಾಕಿದ್ದ ಅಮಾನ್ ಕೇವಲ 7 ಬೌಂಡರಿಗಳನ್ನು ಗಳಿಸಿದ್ದರು.
ಆರಂಭಿಕ ಬ್ಯಾಟರ್ಗಳಾದ ಆಯುಷ್ ಮ್ಹಾತ್ರೆ(54 ರನ್, 29 ಎಸೆತ, 6 ಬೌಂಡರಿ, 4 ಸಿಕ್ಸರ್)ಹಾಗೂ ವೈಭವ್ ಸೂರ್ಯವಂಶಿ(23 ರನ್, 23 ಎಸೆತ, 3 ಬೌಂಡರಿ, 1 ಸಿಕ್ಸರ್)ಕೇವಲ 7.2 ಓವರ್ಗಳಲ್ಲಿ 65 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಮಧ್ಯಮ ಓವರ್ಗಳಲ್ಲಿ ಕಾರ್ತಿಕೇಯ 49 ಎಸೆತಗಳಲ್ಲಿ 5 ಬೌಂಡರಿ, ಒಂದು ಸಿಕ್ಸರ್ ಸಹಾಯದಿಂದ 57 ರನ್ ಕೊಡುಗೆ ನೀಡಿದರು. ಸಿದ್ದಾರ್ಥ್(35 ರನ್, 48 ಎಸೆತ), ಹಾರ್ದಿಕ್ ರಾಜ್ 12 ಎಸೆತಗಳಲ್ಲಿ ಔಟಾಗದೆ 25 ರನ್ ಗಳಿಸಿ ಇನಿಂಗ್ಸ್ಗೆ ಮತ್ತಷ್ಟು ಬಲ ತುಂಬಿದರು.
ಜಪಾನ್ ತಂಡದ ಹ್ಯೂಗೊ ಕೆಲ್ಲಿ(2-42)ಹಾಗೂ ಕೆಫರ್ ಯಮಮೊಟೊ-ಲೇಕ್(2-84)ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.