ಸ್ಪರ್ಧಾತ್ಮಕ ಕ್ರಿಕೆಟಿಗೆ ಮುಹಮ್ಮದ್ ಶಮಿ ವಾಪಸ್
ಮಧ್ಯಪ್ರದೇಶ ವಿರುದ್ಧ ಬಂಗಾಳ 228 ರನ್ ಗೆ ಆಲೌಟ್
ಮುಹಮ್ಮದ್ ಶಮಿ |PC : PTI
ಇಂದೋರ್ : ಕಳೆದ ವರ್ಷ ವಿಶ್ವಕಪ್ ಫೈನಲ್ನಲ್ಲಿ ಆಡಿದ ನಂತರ ಮೊದಲ ಬಾರಿ ಭಾರತದ ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಬುಧವಾರ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಿದ್ದಾರೆ. ಮಧ್ಯಪ್ರದೇಶ ವಿರುದ್ಧ ಬಂಗಾಳ ಆಡಿದ ರಣಜಿ ಟ್ರೋಫಿ ಸಿ ಗುಂಪಿನ 5ನೇ ಸುತ್ತಿನ ಪಂದ್ಯದಲ್ಲಿ ಆಡುವ ಮೂಲಕ ಶಮಿ ಕ್ರಿಕೆಟಿಗೆ ಪುನರಾಗಮನ ಮಾಡಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಬಂಗಾಳ ತಂಡ 228 ರನ್ ಗೆ ಆಲೌಟಾಯಿತು. ಶಹಬಾಝ್ ಅಹ್ಮದ್(92 ರನ್, 80 ಎಸೆತ)ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ಅನುಸ್ತುಪ್ ಮಜುಂದಾರ್ 44 ರನ್ ಕೊಡುಗೆ ನೀಡಿದರು. ಮಧ್ಯಪ್ರದೇಶದ ಪರ ಆರ್ಯನ್ ಪಾಂಡೆ(4-47)ಹಾಗೂ ಕುಲ್ವಂತ್ ಖೆಜ್ರೊಲಿಯ(4-84)ತಲಾ ನಾಲ್ಕು ವಿಕೆಟ್ ಗಳನ್ನು ಪಡೆದರು.
ಮೊದಲ ಇನಿಂಗ್ಸ್ ಆರಂಭಿಸಿರುವ ಮಧ್ಯಪ್ರದೇಶ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ. ಸುಬ್ರಾಂಶು ಸೇನಾಪತಿ(ಔಟಾಗದೆ 44) ಹಾಗೂ ರಜತ್ ಪಾಟಿದಾರ್(ಔಟಾಗದೆ 41)ಕ್ರೀಸ್ನಲ್ಲಿದ್ದಾರೆ. 10 ಓವರ್ ಬೌಲಿಂಗ್ ಮಾಡಿರುವ ಶಮಿ 1 ಮೇಡನ್ ಸಹಿತ 34 ರನ್ ನೀಡಿದ್ದಾರೆ.