ಇಂಗ್ಲೆಂಡ್ ವಿರುದ್ಧ ಟಿ-20 ಸರಣಿ: ಮುಹಮ್ಮದ್ ಶಮಿ ವಾಪಸ್?
ಮುಹಮ್ಮದ್ ಶಮಿ | PC : PTI
ಮುಂಬೈ: ಭಾರತ ಕ್ರಿಕೆಟ್ ತಂಡವು ಈ ತಿಂಗಳು ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಆಡಲಿದ್ದು, ಈ ಸರಣಿಯ ಮೂಲಕ ಮುಹಮ್ಮದ್ ಶಮಿ ಅವರು 14 ತಿಂಗಳುಗಳ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ.
ಈ ಕುರಿತು ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಐವರು ಸದಸ್ಯರ ಆಯ್ಕೆ ಸಮಿತಿಯು ಶನಿವಾರ ಮುಂಬೈನಲ್ಲಿ ಸಭೆ ಸೇರಿದ್ದು, 34ರ ಹರೆಯದ ಶಮಿ ಅವರನ್ನು ಟಿ-20 ತಂಡದಲ್ಲಿ ಸೇರ್ಪಡೆಗೊಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಮ್ಮಡಿ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ ಅವರು 2023ರ ನವೆಂಬರ್ನಿಂದ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಅಹ್ಮದಾಬಾದ್ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತದ ಪರ ಕೊನೆಯ ಪಂದ್ಯ ಆಡಿದ್ದರು.
ಗಾಯದಿಂದ ಚೇತರಿಸಿಕೊಂಡು ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾದ ನಂತರ ಶಮಿ ಅವರು ಮಧ್ಯಪ್ರದೇಶದ ವಿರುದ್ಧ ಕಳೆದ ವರ್ಷದ ನವೆಂಬರ್ನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಬಂಗಾಳದ ಪರ 43 ಓವರ್ಗಳ ಬೌಲಿಂಗ್ ಮಾಡಿದ್ದರು.
ಶಮಿ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 9 ಟಿ-20 ಪಂದ್ಯಗಳನ್ನು ಆಡಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಬರೋಡಾದ ವಿರುದ್ಧ 2 ವಿಕೆಟ್ ಪಡೆದಿದ್ದಾರೆ. ಈಗ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿಯಲ್ಲಿ 3 ಪಂದ್ಯಗಳಲ್ಲಿ ಆಡಿರುವ ಶಮಿ 5 ವಿಕೆಟ್ಗಳನ್ನು ಪಡೆದಿದ್ದಾರೆ.
ಕೆಲವು ತಿಂಗಳುಗಳಿಂದ ದೇಶಿ ಕ್ರಿಕೆಟ್ ನಲ್ಲಿ ಶಮಿ ಆಡುತ್ತಿದ್ದರೂ ಇತ್ತೀಚೆಗೆ ಕೊನೆಗೊಂಡಿರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಯ್ಕೆಗೆ ಪರಿಗಣಿಸಲ್ಪಟ್ಟಿರಲಿಲ್ಲ.
ಆಯ್ಕೆ ಸಮಿತಿಯ ಸದಸ್ಯರು ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ್ದು, ಅವರು ವೇಗಿ ಶಮಿ ಅವರ ಫಿಟ್ನೆಸ್ ಬಗ್ಗೆ ತೃಪ್ತಿವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಟಿ-20 ತಂಡಕ್ಕೆ ವಾಪಸಾಗಲು ದಾರಿ ಮಾಡಿಕೊಟ್ಟಿದ್ದಾರೆ.
ಮತ್ತೆ ತಂಡಕ್ಕೆ ಮರಳಲು ಶಮಿ ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸುತ್ತಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ತಜ್ಞರ ಮೇಲ್ವಿಚಾರಣೆಯಲ್ಲಿ ಹಲವು ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ-20 ಪಂದ್ಯಗಳಿಗೆ ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿರುವುದರಿಂದ ಶಮಿ ಅವರ ಅನುಭವ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಅವರನ್ನು ಒಳಗೊಂಡ ಭಾರತದ ವೇಗದ ಬೌಲಿಂಗ್ ವಿಭಾಗಕ್ಕೆ ನಿರ್ಣಾಯಕವಾಗಲಿದೆ. ಸದ್ಯ ಬುಮ್ರಾ ಗಾಯಗೊಂಡಿರುವ ಕಾರಣ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೂ ಶಮಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭಾರತ-ಇಂಗ್ಲೆಂಡ್ ನಡುವಿನ ಟಿ-20 ಸರಣಿಯು ಜ.22ರಿಂದ ಕೋಲ್ಕತಾದಲ್ಲಿ ಆರಂಭವಾಗಲಿದೆ.