ಮುಹಮ್ಮದ್ ಶಮಿ ಆಲ್ರೌಂಡ್ ಆಟ: ಬಂಗಾಳ ಕ್ವಾರ್ಟರ್ ಫೈನಲ್ಗೆ
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | ಚಂಡೀಗಡ ವಿರುದ್ಧ ರೋಚಕ ಜಯ
ಮುಹಮ್ಮದ್ ಶಮಿ | PC : PTI
ಬೆಂಗಳೂರು : ಮುಹಮ್ಮದ್ ಶಮಿ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಚಂಡಿಗಡ ತಂಡದ ವಿರುದ್ದ 3 ರನ್ನಿಂದ ರೋಚಕ ಜಯ ಸಾಧಿಸಿದ ಬಂಗಾಳ ಕ್ರಿಕೆಟ್ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ.
ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇನಿಂಗ್ಸ್ ಅಂತ್ಯದಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಶಮಿ ಅವರು ಬೌಲಿಂಗ್ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಬಂಗಾಳ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವ ಶಮಿ ಅವರು 17 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ ಔಟಾಗದೆ 32 ರನ್ ಗಳಿಸಿದರು.
ಬಂಗಾಳ ತಂಡವು 16ನೇ ಓವರ್ನಲ್ಲಿ 114 ರನ್ಗೆ 8 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆಗ 188.24ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ ಶಮಿ ಸಹಾಯದಿಂದ ಬಂಗಾಳ ತಂಡವು 9 ವಿಕೆಟ್ಗಳ ನಷ್ಟಕ್ಕೆ 159 ರನ್ ಗಳಿಸಿತು. ಹಿರಿಯ ವೇಗದ ಬೌಲರ್ ಶಮಿ ಅವರು ಕರಣ್ ಲಾಲ್(33ರನ್)ನಂತರ ಬಂಗಾಳದ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬಂಗಾಳ ತಂಡವು ವೃತಿಕ್ ಚಟರ್ಜಿ(28 ರನ್, 12 ಎಸೆತ)ಹಾಗೂ ಪ್ರದೀಪ್ ಪ್ರಾಮಾಣಿಕ್(30 ರನ್, 24 ಎಸೆತ)ಅವರ ಅಮೂಲ್ಯ ಕೊಡುಗೆಯ ನೆರವಿನಿಂದ ಕಳಪೆ ಆರಂಭದಿಂದ ಚೇತರಿಸಿಕೊಂಡಿತು.
ಬೌಲಿಂಗ್ನಲ್ಲೂ ತನ್ನ ಸಾಹಸವನ್ನು ಮುಂದುವರಿಸಿದ ಶಮಿ ಅವರು ಚಂಡಿಗಡದ ರನ್ ಚೇಸ್ ವೇಳೆ ಮೊದಲ ಎಸೆತದಲ್ಲೇ ಆರಂಭಿಕ ಬ್ಯಾಟರ್ ಅರ್ಸ್ಲಾನ್ ಖಾನ್ರನ್ನು ಶೂನ್ಯಕ್ಕೆ ಔಟ್ ಮಾಡಿದರು. 4 ಓವರ್ಗಳಲ್ಲಿ 13 ಡಾಟ್ ಬಾಲ್ಗಳ ಸಹಿತ 25 ರನ್ಗೆ 1 ವಿಕೆಟ್ ವಿಕೆಟ್ ಪಡೆದು ಮಿತವ್ಯಯಿ ಎನಿಸಿಕೊಂಡಿದ್ದಾರೆ.
ಮನನ್ ವೋಹ್ರಾ ನೇತೃತ್ವದಲ್ಲಿ ಚಂಡಿಗಡ ತಂಡವು ಉತ್ತಮ ಪ್ರದರ್ಶನ ನೀಡಿ ಗೆಲುವಿನ ಸನಿಹ ತಲುಪಿತು. ಆದರೆ ಬಂಗಾಳ ತಂಡದ ಬೌಲರ್ಗಳು 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 156 ರನ್ಗೆ ನಿಯಂತ್ರಿಸಿದರು. ಸಯಾನ್ ಘೋಷ್(4-30)ಅತ್ಯುತ್ತಮ ಬೌಲಿಂಗ್ನಿಂದ ಗಮನ ಸೆಳೆದರು.
ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಇನ್ನುಳಿದ ಪಂದ್ಯಗಳಲ್ಲಿ ಭಾರತದ ಟೆಸ್ಟ್ ತಂಡಕ್ಕೆ ವಾಪಸಾಗಲು ಎದುರು ನೋಡುತ್ತಿರುವ ಸಮಯದಲ್ಲೇ ಶಮಿ ಅವರು ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
ದೀರ್ಘಕಾಲದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶಮಿ ಅವರು ರಣಜಿ ಟ್ರೋಫಿಯಲ್ಲಿ ಈಗಾಗಲೇ 42 ಓವರ್ಗಳನ್ನು ಎಸೆದಿದ್ದು, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿದ್ದಾರೆ. ಆದರೆ ಎನ್ಸಿಎಯಿಂದ ಇನ್ನಷ್ಟೇ ಅಂತಿಮ ಫಿಟ್ನೆಸ್ ಕ್ಲಿಯರೆನ್ಸ್ ಪಡೆಯಬೇಕಾಗಿದೆ.