ಪಂದ್ಯಶ್ರೇಷ್ಠ ಪ್ರಶಸ್ತಿ ಬಹುಮಾನ ಮೊತ್ತ ಮೈದಾನದ ಸಿಬ್ಬಂದಿಗೆ ದೇಣಿಗೆ ನೀಡಿದ ಮುಹಮ್ಮದ್ ಸಿರಾಜ್
ಮುಹಮ್ಮದ್ ಸಿರಾಜ್| Photo: twitter\@ICC
ಕೊಲಂಬೊ, ಸೆ.17: ಕೊಲಂಬೊದ ಪ್ರೇಮದಾಸ ಸ್ಟೇಡಿಯಮ್ನಲ್ಲಿ ರವಿವಾರ ನಡೆದ ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಭಾರತದ ವೇಗದ ಬೌಲಿಂಗ್ ದಾಳಿಯನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿ ಶ್ರೀಲಂಕಾದ ಅಗ್ರ ಸರದಿಯನ್ನು ಪುಡಿಗಟ್ಟಿರುವ ಮುಹಮ್ಮದ್ ಸಿರಾಜ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂದಿದೆ. ತನಗೆ ಲಭಿಸಿರುವ 5,000 ಯುಎಸ್ ಡಾಲರ್ ಪ್ರಶಸ್ತಿ ಮೊತ್ತವನ್ನು ಪ್ರೇಮದಾಸ ಸ್ಟೇಡಿಯಮ್ ಸಿಬ್ಬಂದಿಗೆ ಸಮರ್ಪಿಸಿರುವ ಸಿರಾಜ್ ಹೃದಯ ವೈಶ್ಯಾಲತೆಯನ್ನು ಮೆರೆದಿದ್ದಾರೆ.
ಮೈದಾನದ ಸಿಬ್ಬಂದಿ ಇಡೀ ಟೂರ್ನಮೆಂಟ್ನಲ್ಲಿ ಮಳೆ ಅಡ್ಡಿಪಡಿಸಿದರೂ ಪಂದ್ಯಕ್ಕೆ ಮೈದಾನವನ್ನು ಸಿದ್ಧಪಡಿಸಲು ದಣಿವರಿಯದೆ ಶ್ರಮಿಸಿದ್ದಾರೆ. ಮೈದಾನದ ಸಿಬ್ಬಂದಿಯ ಪರಿಶ್ರಮವನ್ನ್ನು ಮೆಚ್ಚಿ ಸಿರಾಜ್ ಬಹುಮಾನ ಮೊತ್ತವನ್ನು ಅವರಿಗೆ ನೀಡಲು ಮುಂದಾಗಿದ್ದಾರೆ. ನನ್ನ ಈ ನಗದು ಮೊತ್ತ ಪ್ರೇಮದಾಸ ಸ್ಟೇಡಿಯಮ್ನ ಸಿಬ್ಬಂದಿಗೆ ಸಲ್ಲಬೇಕಾಗಿದೆ. ಅವರು ಇಲ್ಲದೇ ಇರುತ್ತಿದ್ದರೆ ಈ ಟೂರ್ನಮೆಂಟ್ ನಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಸಿರಾಜ್ ಹೇಳಿದ್ದಾರೆ.
ಕೊಲಂಬೊ ಹಾಗೂ ಪಲ್ಲೆಕೆಲೆಯಲ್ಲಿ ಮೈದಾನವನ್ನು ಪಂದ್ಯಕ್ಕೆ ಸಿದ್ಧಪಡಿಸಲು ಶ್ರಮಿಸಿರುವ ಮೈದಾನ ಸಿಬ್ಬಂದಿಯ ಇಡೀ ತಂಡಕ್ಕೆ ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ರವಿವಾರ 50,000 ಯುಎಸ್ ಡಾಲರ್ ಬಹುಮಾನ ಪ್ರಕಟಿಸಿದರು.