ಲಕ್ನೋ ವಿರುದ್ಧ ಸೋತು ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟ ಮುಂಬೈ
Photo: X/ CricCrazyJohns
ಮುಂಬೈ: ಪ್ಲೇಆಫ್ ರೇಸ್ ನಿಂದ ಎರಡೂ ತಂಡಗಳು ಹೊರಬಿದ್ದ ಹಿನ್ನೆಲೆಯಲ್ಲಿ ಕೇವಲ ಔಪಚಾರಿಕವಾಗಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್ ಗಳ ಸೋಲು ಅನುಭವಿಸಿದ ಮುಂಬೈ ಇಂಡಿಯನ್ಸ್ 17ನೇ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿ ಅಭಿಯಾನ ಮುಗಿಸಿದೆ. 215 ರನ್ ಗಳ ಗುರಿಯನ್ನು ಬೆನ್ನಟ್ಟಿದ ಎಂಐ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಇದಕ್ಕೂ ಮುನ್ನ ನಿಕೋಲಸ್ ಪೂರನ್ (29 ಎಸೆತಗಳಲ್ಲಿ 75) ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಎಲ್ಎಸ್ಜಿ 214 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.
ಎಲ್ಎಸ್ ಜಿ ಪ್ಲೇಆಫ್ಗೆ ರಹದಾರಿ ಪಡೆಯಬೇಕಾದರೆ ಮುಂಬೈ ಇಂಡಿಯನ್ಸ್ ತಂಡವನ್ನು 300 ರನ್ ಗಳ ಅಂತರದಿಂದ ಸೋಲಿಸಬೇಕಿತ್ತು. ಆದರೆ 214 ರನ್ ಗಳಿಸಿದ ತಂಡಕ್ಕೆ ನಾಯಕ ಕೆ.ಎಲ್.ರಾಹುಲ್ (41 ಎಸೆತಗಳಲ್ಲಿ 55) ಆಸರೆಯಾದರು. ಎಲ್ಎಸ್ಜಿ ಪರ ರವಿ ಬಿಷ್ಣೋಯಿ (37ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಲೀಗ್ ಹಂತದ 14 ಪಂದ್ಯಗಳನ್ನೂ ಮುಗಿಸಿರುವ ಉಭಯ ತಂಡಗಳು ಟೂರ್ನಿಯಿಂದ ಹೊರಬಿದ್ದವು. ಮುಂಬೈ ಕೇವಲ 4 ಗೆಲುವಿನೊಂದಿಗೆ 8 ಅಂಕ ಸಂಪಾದಿಸಿ ಕೊನೆಯ ಸ್ಥಾನ ಪಡೆಯಿತು. ಕೊನೆಯ ಪಂದ್ಯ ಗೆದ್ದು 7 ಗೆಲುವಿನೊಂದಿಗೆ 14 ಅಂಕ ಗಳಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ 6ನೇ ಸ್ಥಾನ ಪಡೆದಿದ್ದು, ತಂಡದ ಪಾಲಿಗೆ ಪ್ಲೇಆಫ್ ಹಾದಿ ಮುಚ್ಚಿದೆ. ತಂಡದ ನಿವ್ವಳ ರನ್ ರೇಟ್ ಮೈನಸ್ 0.667 ಆಗಿದೆ.
ಈಗಾಗಲೇ ಕೆಕೆಆರ್, ಆರ್ ಆರ್ ಮತ್ತು ಎಸ್ ಆರ್ ಎಚ್ ತಂಡಗಳು ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಿದ್ದು, ಉಳಿದ ಒಂದು ಸ್ಥಾನಕ್ಕಾಗಿ ಸಿಎಸ್ ಕೆ ಹಾಗೂ ಆರ್ ಸಿಬಿ ಶನಿವಾರ ಸೆಣೆಸಲಿವೆ. ಪಂದ್ಯಕ್ಕೆ ಮಳೆ ಭೀತಿ ಇದ್ದು, ಪಂದ್ಯದಲ್ಲಿ ಫಲಿತಾಂಶ ಬಾರದೇ ಇದ್ದಲ್ಲಿ ಆರ್ ಸಿಬಿ ಟೂರ್ನಿಯಿಂದ ಹೊರಬೀಳಲಿದ್ದು, ಸಿಎಸ್ ಕೆ ಹಾದಿ ಸುಗಮವಾಗಲಿದೆ.