ಸಿಎಸ್ಕೆ ಪರ ಕನಿಷ್ಠ ಎರಡು ಪಂದ್ಯಗಳಿಗೆ ಮುಸ್ತಫಿಝುರ್ರಹ್ಮಾನ್ ಅಲಭ್ಯ?
ಮುಸ್ತಫಿಝುರ್ರಹ್ಮಾನ್ , ಧೋನಿ | Photo: PTI
ಚೆನ್ನೈ: ಟಿ20 ವಿಶ್ವಕಪ್ ಗೆ ತನ್ನ ಅಮೆರಿಕದ ವೀಸಾ ವಿಧಿವಿಧಾನವನ್ನು ಪೂರೈಸಲು ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಬಾಂಗ್ಲಾದೇಶಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಕನಿಷ್ಠ ಎರಡು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಲಭ್ಯವಿರುವುದಿಲ್ಲ.
ಮುಸ್ತಫಿಝುರ್ರಹ್ಮಾನ್ ಈ ವರ್ಷದ ಮೊದಲ ಮೂರು ಪಂದ್ಯಗಳಲ್ಲಿ ಆಡಿದ್ದಾರೆ. ಚೆನ್ನೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮೊದಲೆರಡು ಓವರ್ಗಳಲ್ಲಿ ತಲಾ ಎರಡು ವಿಕೆಟ್ನಂತೆ 29 ರನ್ಗೆ ಒಟ್ಟು 4 ವಿಕೆಟ್ಗಳನ್ನು ಉರುಳಿಸಿದ್ದ ಎಡಗೈ ವೇಗದ ಬೌಲರ್ ಹಾಲಿ ಚಾಂಪಿಯನ್ ಚೆನ್ನೈ ಸುಲಭವಾಗಿ ಜಯ ಸಾಧಿಸಲು ನೆರವಾಗಿದ್ದರು. ಮುಸ್ತಫಿಝುರ್ರಹ್ಮಾನ್ ಒಟ್ಟು 7 ವಿಕೆಟ್ಗಳನ್ನು ಕಬಳಿಸಿ ಪ್ರಸ್ತುತ ಸ್ಪರ್ಧಾವಳಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಸಿಎಸ್ಕೆ ಸದ್ಯ ಹೈದರಾಬಾದ್ನಲ್ಲಿದ್ದು, ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಎಪ್ರಿಲ್ 8ರಂದು ಚೆನ್ನೈನ ತವರು ಮೈದಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಆಡಲಿದೆ.
28ರ ಹರೆಯದ ಮುಸ್ತಫಿಝರ್ರಹ್ಮಾನ್ ಮೊದಲ ಮೂರು ಪಂದ್ಯಗಳಲ್ಲಿ ಮುಖ್ಯವಾಗಿ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ತನ್ನ ವೇಗದಲ್ಲಿ ಬದಲಾವಣೆ ಹಾಗೂ ಕಟ್ಟರ್ಗಳ ಮೂಲಕ ಪ್ರಭಾವಿ ಪ್ರದರ್ಶನ ನೀಡಿದ್ದರು. ಬಾಂಗ್ಲಾದೇಶದ ಬೌಲರ್ ಎಪ್ರಿಲ್ 30ರ ತನಕ ಮಾತ್ರ ಐಪಿಎಲ್ಗೆ ಲಭ್ಯವಿರುತ್ತಾರೆ. ಆ ನಂತರ ಮೇನಲ್ಲಿ ನಡೆಯಲಿರುವ ಝಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯನ್ನು ಆಡಲು ತನ್ನ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಮುಸ್ತಫಿಝರ್ರಹ್ಮಾನ್ ಒಂದು ವೇಳೆ ತನ್ನ ವೀಸಾವನ್ನು ಪಡೆದು ಸರಿಯಾದ ಸಮಯಕ್ಕೆ ತನ್ನ ಪಾಸ್ಪೋರ್ಟ್ ಗಿಟ್ಟಿಸಿಕೊಂಡರೆ ಎಪ್ರಿಲ್ನಲ್ಲಿ ಕನಿಷ್ಠ 4 ಪಂದ್ಯಗಳಿಂದ ವಂಚಿತರಾಗಲಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್, ಲಕ್ನೊ ಸೂಪರ್ ಜಯಂಟ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಗಳು ಒಳಗೊಂಡಿವೆ.