ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಅಶ್ವಿನ್ ಬಗ್ಗೆ ಮುತ್ತಯ್ಯ ಮುರಳೀಧರನ್ ಗುಣಗಾನ
PC: x.com/LoyalSachinFan
ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಸಾಧನೆಯನ್ನು ವಿಶ್ವದ ಸರ್ವಶ್ರೇಷ್ಠ ಬೌಲರ್ ಮುತ್ತಯ್ಯ ಮುರಳೀಧರನ್ ಕೊಂಡಾಡಿದ್ದಾರೆ. ಅಶ್ವಿನ್ ಭವಿಷ್ಯದ ಆಟಗಾರರಿಗೆ ಸ್ಫೂರ್ತಿ ಎಂದು ಹೇಳಿದ್ದಾರೆ.
ಡ್ರಾನಲ್ಲಿ ಅಂತ್ಯಗೊಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಬಳಿಕ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಅಶ್ವಿನ್ 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್ ಕಬಳಿಸಿದ್ದಾರೆ. ಅನಿಲ್ ಕುಂಬ್ಳೆ (619) ಅವರನ್ನು ಹೊರತುಪಡಿಸಿದರೆ ಭಾರತದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಅಶ್ವಿನ್ ಸಾಧನೆ ಸಣ್ಣದೇನಲ್ಲ ಎಂದು ಮುರಳೀಧರನ್ ವಿಶ್ಲೇಷಿಸಿದ್ದಾರೆ.
"ಅಶ್ವಿನ್ ಬ್ಯಾಟ್ಸ್ ಮನ್ ಆಗಿ ವೃತ್ತಿಜೀವನ ಆರಂಭಿಸಿದವರು ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಸ್ಪಿನ್ ಬೌಲಿಂಗ್ ಅವರ ಅರೆಕಾಲಿಕ ಆಯ್ಕೆಯಾಗಿತ್ತು. ಬಳಿಕ ಅವರು ಬೌಲಿಂಗ್ ಬಗ್ಗೆ ಹೆಚ್ಚಿನ ಗಮನ ಹರಿಸಿದರು. ಆ ದಿಟ್ಟ ಹಾಗೂ ಪ್ರಮುಖ ಸಾಧನೆಗಾಗಿ ಅವರನ್ನು ಅಭಿನಂದಿಸಲೇಬೇಕು. ಟೆಸ್ಟ್ ನಲ್ಲಿ 500 ವಿಕೆಟ್ ಪಡೆಯುವುದು ಉದ್ಯಾನವನದಲ್ಲಿ ವಾಯುವಿಹಾರ ಮಾಡಿದಂತಲ್ಲ" ಎಂದು ಟೆಲಿಕಾಂ ಏಷ್ಯಾ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
133 ಪಂದ್ಯಗಳಲ್ಲಿ 800 ವಿಕೆಟ್ ಗಳಿಸಿ ಟೆಸ್ಟ್ ನಿಂದ ನಿವೃತ್ತರಾಗಿದ್ದ ಮುರಳೀಧರನ್, ಅಶ್ವಿನ್ ಅವರನ್ನು ಕಲಿಕೆಯ ಇಚ್ಛೆ ಇರುವ ಯುವ, ಪ್ರತಿಭಾವಂತ ಆಟಗಾರ ಎಂದು ಬಣ್ಣಿಸಿದ್ದರು.
ಮುರಳೀಧರನ್ ಬಳಿಕ ಎರಡನೇ ಅತ್ಯಂತ ಯಶಸ್ವಿ ಆಫ್ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಶ್ವಿನ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 537 ಟೆಸ್ಟ್ ವಿಕೆಟ್ ಗಳೊಂದಿಗೆ ವಿಶ್ವದ ಏಳನೇ ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ದರು.
"ಭಾರತದ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಗಳ ಪೈಕಿ ಎರಡನೇ ಸ್ಥಾನ ಪಡೆದು ನಿವೃತ್ತರಾಗುವುದು ಐತಿಹಾಸಿಕ ಕ್ಷಣ. ಅಶ್ವಿನ್ ಸ್ವತಃ ತಾವು, ತಮಿಳುನಾಡು ಕ್ರಿಕೆಟ್ ಹಾಗೂ ಇಡೀ ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರ ಎರಡನೇ ಇನ್ನಿಂಗ್ಸ್ ಗೆ ನಾನು ಯಶಸ್ಸು ಬಯಸುತ್ತೇನೆ" ಎಂದು ಹೇಳಿದ್ದಾರೆ.