ನಾಗ್ಪುರದಲ್ಲಿ ಏಕದಿನ ಕ್ರಿಕೆಟ್ ತಂಡ ಸೇರಿಕೊಂಡ ವರುಣ್ ಚಕ್ರವರ್ತಿ

ವರುಣ್ ಚಕ್ರವರ್ತಿ | PTI
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಫೆಬ್ರವರಿ 6ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಿಂತ ಮೊದಲು ಆಯೋಜಿಸಿರುವ ಕಿರು ಶಿಬಿರದಲ್ಲಿ ಭಾಗವಹಿಸಲು ವರುಣ್ ಚಕ್ರವರ್ತಿ ನಾಗ್ಪುರದಲ್ಲಿ ಭಾರತದ ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ.
ಸರಣಿ ಆರಂಭಕ್ಕೆ ಮೊದಲು ರೋಹಿತ್ ಶರ್ಮಾ ಬಳಗ ಕಿರು ಶಿಬಿರದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ಆಗಮಿಸಿದೆ. ಇತ್ತೀಚೆಗೆ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಭಾರೀ ಯಶಸ್ಸು ಕಂಡಿರುವ ವರುಣ್ ಇದೀಗ ತಂಡಕ್ಕೆ ಸೇರಿದ್ದು, ವಿಶೇಷವಾಗಿದೆ.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಲ್ಲಿ ಸ್ಪಿನ್ನರ್ ವರುಣ್ 14 ವಿಕೆಟ್ಗಳನ್ನು ಉರುಳಿಸಿದ್ದರು. ಎಲ್ಲ ಪಂದ್ಯಗಳಲ್ಲಿ ಎದುರಾಳಿಯ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು. ರಾಜ್ಕೋಟ್ನಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಐದು ವಿಕೆಟ್ ಗೊಂಚಲನ್ನೂ ಕಬಳಿಸಿದ್ದರು. ವರುಣ್ ನಾಗ್ಪುರದಲ್ಲಿ ಶಿಬಿರವನ್ನು ಸೇರ್ಪಡೆಯಾಗುವ ಕುರಿತು ಅಧಿಕೃತ ಪ್ರಕಟನೆ ಹೊರಬಂದಿಲ್ಲ. ವರುಣ್ ಅವರು ನೆಟ್ ಪ್ರಾಕ್ಟೀಸ್ ಮಾತ್ರ ಸೀಮಿತವಾಗುತ್ತಾರೋ ಅಥವಾ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಾರೋ ಎಂಬುದು ಸ್ಪಷ್ಟವಾಗಿಲ್ಲ.
33ರ ಹರೆಯದ ವರುಣ್ ಇನ್ನೂ ಏಕದಿನ ಕ್ರಿಕೆಟಿಗೆ ಕಾಲಿಟ್ಟಿಲ್ಲ. ದೇಶಿ ಕ್ರಿಕೆಟ್ನಲ್ಲಿ ತನ್ನ ರಾಜ್ಯ ತಮಿಳುನಾಡು ಪರ 23 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಈ ವರ್ಷಾರಂಭದಲ್ಲಿ ವಿಜಯ್ ಹಝಾರೆ ಟ್ರೋಫಿಯಲ್ಲಿ ತನ್ನ ರಾಜ್ಯದ ಪರ ಕೊನೆಯ ಪಂದ್ಯ ಆಡಿದ್ದರು. ವಡೋದರಲ್ಲಿ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದಿದ್ದರು.
ಆಸ್ಟ್ರೇಲಿಯದ ವಿರುದ್ಧ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ತನ್ನ ನಿವೃತ್ತಿಯನ್ನು ಪ್ರಕಟಿಸಿದ್ದ ಭಾರತದ ಮಾಜಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಭಾರತದ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ವರುಣ್ರನ್ನು ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿದ್ದರು.
*ಇಂಗ್ಲೆಂಡ್ ವಿರುದ್ಧ್ದ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡ
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮುಹಮ್ಮದ್ ಶಮಿ.