0.01 ಮೀಟರ್ ಅಂತರದಿಂದ ಚಿನ್ನ ಕಳೆದುಕೊಂಡ ನೀರಜ್ ಚೋಪ್ರಾ
PC: x.com/vinayakkm
ಹೊಸದಿಲ್ಲಿ: ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಬ್ರುಸೆಲ್ಸ್ ನಲ್ಲಿ ಶನಿವಾರ ನಡೆದ ಡೈಮಂಡ್ ಲೀಗ್ ಫೈನಲ್ ನಲ್ಲಿ ಕೂದಲೆಳೆ ಅಂತದಿಂದ ಚಿನ್ನ ಕಳೆದುಕೊಂಡು, ಬೆಳ್ಳಿಗೆ ತೃಪ್ತಿಪಟ್ಟರು.
ತುರುಸಿನ ಸ್ಪರ್ಧೆಯಲ್ಲಿ 87.87 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ಗ್ರೆನೇಡಾದ ಆಂಡರ್ಸನ್ ಪೀಟರ್ಸ್ ಚಿನ್ನದ ಪದಕ ಗಳಿಸಿದರು. ಚೋಪ್ರಾ ತಮ್ಮ ಮೂರನೇ ಪ್ರಯತ್ನದಲ್ಲಿ ತಮ್ಮ ಅತ್ಯುತ್ತಮ ಸಾಧನೆಯಾದ 86.86 ಮೀಟರ್ ದೂರವನ್ನು ಸಾಧಿಸಿದರು. ಆದರೆ ಎದುರಾಳಿಯ ಎಸೆತಕ್ಕಿಂತ 0.01 ಮೀಟರ್ ನಷ್ಟು ಹಿಂದುಳಿದರು.
ಅಂತಿಮ ಪ್ರಯತ್ನದಲ್ಲಿ ಕೇವಲ 77.75 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಲು ಸಾಧ್ಯವಾದ ಜ್ಯೂಲಿಯನ್ ವೆಬೆರ್, ಮೊದಲ ಸುತ್ತಿನಲ್ಲಿ ಎಸೆದ 85.97 ಮೀಟರ್ ಆಧಾರದಲ್ಲಿ ಮೂರನೇ ಸ್ಥಾನ ಪಡೆದರು. ನಾಟಕೀಯ ತಿರುವುಗಳನ್ನು ಕಂಡ ಸ್ಪರ್ಧೆಯಲ್ಲಿ ಚೋಪ್ರಾ ಆರಂಭಿಕ ಪ್ರಯತ್ನದಲ್ಲೇ 86.82 ಮೀಟರ್ ದೂರಕ್ಕೆ ಎಸೆದು, ಪೀಟರ್ಸ್ಗಿಂತ ಹಿಂದಿದ್ದರು. ಪ್ರತಿ ಸುತ್ತು ಮುಗಿದಂತೆಯೂ 87.87 ಮೀಟರ್ ದೂರವನ್ನು ಪೀಟರ್ಸ್ ಉಳಿಸಿಕೊಂಡರು. ನಾಲ್ಕು ಹಾಗೂ ಐದನೇ ಪ್ರಯತ್ನದಲ್ಲಿ ಚೋಪ್ರಾ 82.04 ಮತ್ತು 83.30 ಮೀಟರ್ ಗೆ ತೃಪ್ತರಾದರು.
ಕೊನೆ ಪ್ರಯತ್ನದಲ್ಲಿ ವೆಬೆರ್ 77.75 ಮೀಟರ್ ಎಸೆದು, ಚೋಪ್ರಾ 86.46 ಮೀಟರ್ ಎಸೆದರೂ, ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.