ಡೈಮಂಡ್ ಲೀಗ್ ಸೀಸನ್ ಫೈನಲ್ ಗೆ ನೀರಜ್ ಚೋಪ್ರಾ ಅರ್ಹತೆ
ನೀರಜ್ ಚೋಪ್ರಾ | PTI
ಹೊಸದಿಲ್ಲಿ : ಭಾರತದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಸ್ಟಾರ್ ನೀರಜ್ ಚೋಪ್ರಾ ಈ ತಿಂಗಳು ನಡೆಯಲಿರುವ ಪ್ರತಿಷ್ಠಿತ ಡೈಮಂಡ್ ಲೀಗ್ ಸೀಸನ್ ಫಿನಾಲೆಗೆ ಅರ್ಹತೆ ಪಡೆದಿದ್ದಾರೆ. ವಿಶ್ವದಾದ್ಯಂತ ನಡೆದ 14 ಸಿರೀಸ್ ನ ಅಂತ್ಯದಲ್ಲಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ನಂತರ ಚೋಪ್ರಾ ಫಿನಾಲೆಗೆ ಅರ್ಹತೆ ಗಿಟ್ಟಿಸಿಕೊಂಡರು.
ಸೀಸನ್ ಫೈನಲ್ ಸೆಪ್ಟಂಬರ್ 13 ಹಾಗೂ 14 ಎರಡು ದಿನಗಳ ಕಾಲ ಬ್ರಸೆಲ್ಸ್ನಲ್ಲಿ ನಡೆಯಲಿದೆ.
ದೋಹಾ ಹಾಗೂ ಲಾಸನ್ನಲ್ಲಿ ಒಂದೇ ದಿನ ನಡೆದಿದ್ದ ಡೈಮಂಡ್ ಲೀಡ್ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದಿದ್ದ ನೀರಜ್ ಒಟ್ಟು 14 ಅಂಕ ಗಳಿಸಿದ್ದರು. ಗುರುವಾರ ಝೂರಿಚ್ನಲ್ಲಿ ನಡೆದಿದ್ದ ಸರಣಿಯ ಕೊನೆಯ ಕ್ರೀಡಾಕೂಟದಿಂದ ನೀರಜ್ ಹೊರಗುಳಿದಿದ್ದರು.
26ರ ಹರೆಯದ ಚೋಪ್ರಾ ಝೆಕ್ನ ಜಾಕಬ್ ವಡ್ಲೆಚ್ರಿಂದ 2 ಅಂಕ ಹಿಂದಿದ್ದಾರೆ. ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ಹಾಗೂ ಜರ್ಮನಿಯ ಸ್ಟಾರ್ ಜುಲಿಯನ್ ವೆಬೆರ್ ಕ್ರಮವಾಗಿ 29 ಹಾಗೂ 21 ಅಂಕದೊಂದಿಗೆ ಅಗ್ರ ಎರಡು ಸ್ಥಾನಗಳನ್ನು ಪಡೆದಿದ್ದಾರೆ.
2021ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿರುವ ನೀರಜ್, ಕಳೆದ ತಿಂಗಳು ಕೊನೆಗೊಂಡಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಈ ಋತುವಿನಲ್ಲಿ ತನ್ನ ದೈಹಿಕ ಕ್ಷಮತೆಯ ವಿಚಾರದಲ್ಲಿ ಪರದಾಟ ನಡೆಸುತ್ತಿದ್ದಾರೆ.
ಇತ್ತೀಚೆಗೆ ಲಾಸನ್ ಡೈಮಂಡ್ ಲೀಗ್ ನಲ್ಲಿ ನೀರಜ್ 2ನೇ ಸ್ಥಾನ ಪಡೆದಿದ್ದರು. ಪೀಟರ್ಸ್(90.61 ಮೀ.)ಮೊದಲ ಸ್ಥಾನ ಪಡೆದಿದ್ದರು.
ನೀರಜ್ 2022 ಹಾಗೂ 2023ರಲ್ಲಿ ಡೈಮಂಡ್ ಲೀಗ್ ಫೈನಲ್ ನಲ್ಲಿ ಜಯ ಸಾಧಿಸಿದ್ದರು. ಆದರೆ ಕಳೆದ ವರ್ಷ ಅಮೆರಿಕದಲ್ಲಿ ನಡೆದ ಫೈನಲ್ ನಲ್ಲಿ ವಡ್ಲೆಜ್ ನಂತರ ಎರಡನೇ ಸ್ಥಾನ ಪಡೆದಿದ್ದರು.
ಪ್ರತಿಯೊಬ್ಬ ಡೈಮಂಡ್ ಲೀಗ್ ಸೀಸನ್ ಫಿನಾಲೆ ಚಾಂಪಿಯನ್ ಗೆ ಪ್ರತಿಷ್ಠಿತ ಡೈಮಂಡ್ ಟ್ರೋಫಿ, 30,000 ಯುಎಸ್ ಡಾಲರ್ ಬಹುಮಾನ ಹಾಗೂ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಗೆ ವೈರ್ಲ್ಡ್ ಕಾರ್ಡ್ ನೀಡಲಾಗುತ್ತದೆ.